Sunday, February 5, 2012

ವಿತ್ತ ಕೊರತೆಯಿದ್ದರೆ ವೆಚ್ಚಕ್ಕೆ ಕಡಿವಾಣ ಹಾಕಿ!

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.6ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ ಅಂದಿದ್ದಾರೆ ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ ಎಂ.ಗೋವಿಂದ ರಾವ್. ಅಂದರೆ ಕೇಂದ್ರ ಸರ್ಕಾರದ ಬಜೆಟಿನ ಶೇ.1ರಷ್ಟು ಹೆಚ್ಚು ಆರ್ಥಿಕ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ. ಭಾರತ ಇಂದು ಆರ್ಥಿಕ ಕೊರತೆಯ ಸಂಕಷ್ಟದ ಸುಳಿಯಲ್ಲಿ ನಲುಗುತ್ತಿರುವುದು ಏಕೆಂದು ಚಿಂತಿಸುತ್ತಾ ಹೋದರೆ ಕಾರಣಗಳ ನೂರಾರು ಪುಟಗಳು ತೆರದುಕೊಳ್ಳುತ್ತವೆ.
ಮೂಗಿಗಿಂತ ಮೂಗುತಿ ಭಾರ ಎಂಬ ಗಾದೆ ಮಾತು ನಮ್ಮ ವಿತ್ತೀಯ ಕೊರತೆಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ, ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರ ಕಣ್ಣ ಮುಂದಿರುವುದು ಓಲೈಕೆ ರಾಜಕಾರಣ. ಯಾವ ಮತದಾರನನ್ನು ಹೇಗೆ ಓಲೈಸುವುದು ಎಂಬ ಲೆಕ್ಕಾಚಾರದಲ್ಲೇ ನಮ್ಮ ವಿತ್ತ ಮಂತ್ರಿಗಳು ಬಜೆಟ್ ಸಿದ್ಧಪಡಿಸಿದರೆ ಸಿದ್ಧಗೊಳ್ಳುವ ಬಜೆಟಿನ ಗಾತ್ರ ಹಿರಿದಾಗುತ್ತಾ ಹೋಗುತ್ತದೆಯೇ ಹೊರತು ಕಿರಿದಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಮೊದಲಿನ ಸರ್ಕಾರಕ್ಕಿಂತ ದೊಡ್ಡ ಬಜೆಟ್ ಮಂಡಿಸಿದ ಕೀರ್ತಿಯನ್ನು ಪಡೆಯಬೇಕು ಎಂಬ ಭ್ರಮಾಸಾಗರದಲ್ಲಿ ತೇಲಾಡುತ್ತಿರುವುದು ಕೂಡಾ ಬಜೆಟಿನ ಗಾತ್ರ ಹಿರಿದಾಗುವುದಕ್ಕೆ ಕಾರಣವಾಗಿದೆ. ಬಜೆಟ್ ಹಿರಿದಾರೆ ಸಮಸ್ಯೆಯೇನು? ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದಾದರೆ ದೊಡ್ಡ ಬಜೆಟ್ ಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕಾಡಬಹುದು.
ಯಾವುದೇ ಒಂದು ಸರ್ಕಾರ ಬಜೆಟ್ ಮಂಡಿಸುವಾಗ ತನಗೆಷ್ಟು ಆದಾಯ ಬಂದಿದೆ ಎಂಬುದನ್ನು ಮೊದಲು ಗಮನಿಸಬೇಕು. ಹಿಂದಿನ ವರ್ಷದಲ್ಲಿ ಬಂದ ಆದಾಯ, ಹಿಂದಿನ ವರ್ಷದ ಬಜೆಟ್ ಮತ್ತು ಆ ಬಜೆಟ್ ಮೊತ್ತವನ್ನು ತುಂಬಿಸುವುದಕ್ಕಿಂತ ಹೆಚ್ಚು ಆದಾಯ ಬಂದಿದೆಯೇ, ಬಜೆಟ್ ಮೊತ್ತಕ್ಕಿಂತ ಕಡಿಮೆ ಆದಾಯದಲ್ಲಿದ್ದು ತಾನು ಸಾಲದ ಸುಳಿಯಲ್ಲಿದ್ದೇನೆಯೇ ಎಂಬೆಲ್ಲ ವಿಚಾರಗಳನ್ನು ಗಮನಿಸಿ ಬಜೆಟ್ ಸಿದ್ಧಪಡಿಸಬೇಕಾದದ್ದು ಆರ್ಥಿಕ ಧರ್ಮ. ಆದರೆ ನಮ್ಮ ಸರ್ಕಾರಗಳು ಈ ಯಾವ ಅಂಶಗಳನ್ನೂ ಗಮನಿಸದೆ ಕೇವಲ ಸ್ವಪ್ರತಿಷ್ಠೆಯ ಭೂತದ ಹಿಂದೆ ಬಿದ್ದಿರುವುದು ವಿಪರ್ಯಾಸ. ಒಂದು ಮನೆಯನ್ನು ಎಷ್ಟು ಬೇಕಾದರೂ ಚಂದಗಾಣಿಸಬಹುದು,ಯಾವ ರೀತಿಯ ಅಲಂಕಾರಗಳನ್ನಾದರೂ ಮಾಡಬಹುದು. ಬುಡವೇ ಗಟ್ಟಿ ಇಲ್ಲ ಎಂದಾದರೆ? ಮನೆಯೊಳಗಿನ ಅಲಂಕಾರಕ್ಕೆ ಗಮನ ಕೊಡುವ ಮೊದಲು ಬುನಾದಿಯನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಅಂತೆಯೇ ಆರ್ಥಿಕ ವಿಚಾರ. ಒಂದು ದೇಶದ ಅಥವಾ ರಾಜ್ಯದ ಅಥವಾ ಯಾವುದೇ ನಗರಪಾಲಿಕೆ ಬಜೆಟ್ ಸಿದ್ಧಪಡಿಸುವ ಮೊದಲು ಆಯಾ ಆಡಳಿತ ವ್ಯಾಪ್ತಿಯ ಸಾಲಗಳನ್ನು ತೀರಿಸುವ ಕಡೆಗೆ ಗಮನ ಹರಿಸಬೇಕು. ದೊಡ್ಡ ಮೊತ್ತದ ಯೋಜನೆಗಳ ಕಡೆಗೆ ನಂತರ ಗಮನ ಕೊಡಬೇಕು. ಇಷ್ಟೆಲ್ಲ ಯೋಚನೆ ಮಾಡುವಂಥ ಸರ್ಕಾರಗಳು ಬಹುಶಃ ಸಿಗುವುದು ಕಷ್ಟ!
ನಮ್ಮ ಕೇಂದ್ರ ಸರ್ಕಾರವೂ ಸಾಲದ ಸುಳಿಯಲ್ಲಿಯೇ ಇದೆ. ಆದಾಗ್ಯೂ ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಬಲ್ಲಂಥ ಆಹಾರಭದ್ರತಾ ಮಸೂದೆಯಂಥ ಮಸೂದೆಗಳನ್ನು ಜಾರಿಗೆ ತರುತ್ತಿದೆ. 'ಬಡಜನರ ಕಲ್ಯಾಣಕ್ಕಾಗಿ' ಎಂಬ ಹಣೆಪಟ್ಟಿಯೊಂದಿಗೆ ರೂಪಿಸಿದಂಥ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಖಾತ್ರಿಯಾಗುವ ಬದಲು ಭ್ರಷ್ಟಾಚಾರ ಖಾತ್ರಿಯಾಗಿದೆ! ಈ ಯೋಜನೆ ಮಾತ್ರವಲ್ಲ, ಬಹಳಷ್ಟು ಯೋಜನೆಗಳಲ್ಲಿ ಬಿಡುಗಡೆಯಾಗುವ ನಿಧಿಯಲ್ಲಿ ಸಿಂಹಪಾಲು ಭ್ರಷ್ಟರ ಪಾಲಾಗುತ್ತಿದೆ. ಒಂದು ಯೋಜನೆಗೆ ಒಂದು ರುಪಾಯಿ ನೀಡಿದರೆ ಅದರಲ್ಲಿ 10 ಪೈಸೆಯೂ ಯೋಜನೆಗೆ ಬಳಕೆಯಾಗುವುದಿಲ್ಲ ಎಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹೇಳಿದ್ದರು. ಆದರೂ ನಮ್ಮ ಯಾವ ಸರ್ಕಾರಗಳಿಂದಲೂ ಈ ಭ್ರಷ್ಟಾಚಾರವೆಂಬ ರಕ್ಕಸನನ್ನು ಸಂಹರಿಸುವುದಕ್ಕೆ ಸಾಧ್ಯವಾಗಲಿಲ್ಲ ಅಥವಾ ಅದಕ್ಕೆ ಪ್ರಯತ್ನಿಸುವ ಮನಸು ಅವುಗಳಿಗೆ ಇರಲೇ ಇಲ್ಲ ಎಂದು ಹೇಳುವುದು ಸೂಕ್ತ.
ಕೇಂದ್ರ ಸರ್ಕಾರ ಒಂದೇ ಎಲ್ಲದಕ್ಕೂ ಕಾರಣವಾಗುವುದಿಲ್ಲ. ಪ್ರತಿಯೊಂದು ರಾಜ್ಯ ಸರ್ಕಾರ, ನಗರಪಾಲಿಕೆಗಳು, ಪಂಚಾಯ್ತಿಗಳು ಕೂಡಾ ಇದಕ್ಕೆ ಕಾರಣವಾಗುತ್ತವೆ. ನಮ್ಮ ಕರ್ನಾಟಕ ಸರ್ಕಾರವೇ ಈ ತಿಂಗಳಾಂತ್ಯದಲ್ಲಿ 1 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸುವುದಕ್ಕೆ ಸಿದ್ಧವಾಗುತ್ತಿದೆ. ಅಷ್ಟು ಆದಾಯ ಇದೆಯೇ ಎಂದು ದಯವಿಟ್ಟು ಪ್ರಶ್ನಿಸಬೇಡಿ. ಬಜೆಟ್ ದೊಡ್ಡದಾಗಿ ಬಂಡವಾಳ ಕಡಿಮೆಯಾದರೆ ಆದಾಯ ಹುಟ್ಟಿಸುವುದಕ್ಕಾಗಿ ದೊಡ್ಡ ಮೊತ್ತದ ತೆರಿಗೆಯನ್ನು ಹೇರುವುದಕ್ಕೂ ನಮ್ಮ ಸರ್ಕಾರಗಳು ಸಿದ್ಧವಿರುತ್ತವೆ ಎಂಬುದನ್ನು ಮರೆಯಬೇಡಿ.
ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನೇ ಗಮನಿಸಿ. ಕಳೆದ ಬಾರಿ 10,000 ಕೋಟಿ ರು. ಮೊತ್ತದ ಬಜೆಟ್ ಮಂಡಿಸಿದ್ದರ ಪರಿಣಾಮವಾಗಿ ಈಗ ಸಾಲದ ಹೆರೆಯನ್ನು ಹೊತ್ತುಕೊಂಡಿದೆ. ಅಗತ್ಯ ವೆಚ್ಚಗಳಿಗೆ ಹಣವಿಲ್ಲ ಅಂತ ಮಹಾನಗರದ ಅತಿದೊಡ್ಡ ಮಾರುಕಟ್ಟೆಯಾದ ಕೃಷ್ಣರಾಜ ಮಾರುಕಟ್ಟೆಯನ್ನೇ ಅಡ ಇಟ್ಟು 500 ಕೋಟಿ ರು.ಗಳ ಸಾಲವನ್ನು ಪಡೆದಿದೆ. ಇದು ಖಂಡಿತಕ್ಕೂ ಮುಂದಿನ ದಿನಗಳಲ್ಲಿ ಕಗ್ಗಂಟಾಗಿ ಪರಿಣಮಿಸಲಿದೆ.
ಒಂದು ದೇಶದ ಆದಾಯ ಹೆಚ್ಚಳಕ್ಕೆ ರಫ್ತು ಉದ್ಯಮವೂ ನೆರವಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು, ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ದಾಂಗುಡಿಯಿಡುತ್ತಿರುವ ಕಾರಣದಿಂದಾಗಿ ಆ ದೇಶಗಳು ತಮ್ಮ ವೆಚ್ಚಗಳನ್ನು ತಗ್ಗಿಸಿವೆ. ಆಮದು ಪ್ರಮಾಣವನ್ನು ಕಡಿಮೆಗೊಳಿಸಿವೆ. ಇದರ ಪರಿಣಾಮ ಭಾರತದ ಮೇಲೂ ಆಗಿದೆ. ಭಾರತದ ರಫ್ತು ಪ್ರಮಾಣ ಕಳೆದ ಏಪ್ರಿಲ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಬಹಳಷ್ಟು ಕುಸಿತ ಕಂಡಿದ್ದು, ಇದರಿಂದಾಗಿ 1270 ಕೋಟಿ ಡಾಲರ್ ವಹಿವಾಟು ನಷ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆಯ ಅಂಕಿ-ಅಂಶ ತಿಳಿಸುತ್ತದೆ. ಇದೇ ವೇಳೆ ಭಾರತದ ಆಮದು ಪ್ರಮಾಣ ಅಧಿಕವಾಗಿದೆ. ಇದು ಆರ್ಥಿಕ ನಷ್ಟದ ಮೇಲ ದೊಡ್ಡ ಹೊಡೆತವನ್ನೇ ನೀಡಿದೆ.
ಐರೋಪ್ಯ ರಾಷ್ಟ್ರಗಳು ಬುದ್ಧಿವಂತಿಕೆಯಿಂದ ತಮ್ಮ ವೆಚ್ಚ ತಗ್ಗಿಸಿ ಆರ್ಥಿಕ ದೃಢತೆ ಸಾಧಿಸುವುದಕ್ಕೆ ಪ್ರಯತ್ನ ಪಡುತ್ತಿರುವುದು ನಮ್ಮ ಸರ್ಕಾರಗಳಿಗೆ ಪಾಠವಾದೀತೇ? ಜಗತ್ತಿನಾದ್ಯಂತ ಎರಡನೇ ಸುತ್ತಿನ ಆರ್ಥಿಕ ಹಿಂಜರಿತ ತೀವ್ರಗೊಳ್ಳುತ್ತಿರುವಂಥ ಈ ದಿನಗಳಲ್ಲಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಅಭಿವೃದ್ಧಿ ಆಗಬೇಕು ನಿಜ. ಹಾಗಂತ ಸಾಲ ಮಾಡಿ ಮೃಷ್ಟಾನ್ನ ಭೋಜನ ಮಾಡಬೇಕೆ? ಒಂದು ವೇಳೆ ನಮ್ಮ ಸರ್ಕಾರಗಳು ಎಚ್ಚುತ್ತುಕೊಂಡು ಖರ್ಚು-ವೆಚ್ಚಗಳಿಗೆ (ಮುಖ್ಯವಾಗಿ ರಾಜಕಾರಣಿಗಳು ಸರ್ಕಾರಿ ಬೊಕ್ಕಸದಿಂದ ಮಾಡುವ ವೆಚ್ಚಕ್ಕೆ) ಕಡಿವಾಣ ಹಾಕುವುದಕ್ಕೆ ಕ್ರಮ ಕೈಗೊಳ್ಳದೇ ಹೋದಲ್ಲಿ, ಹಣಕ್ಕಾಗು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೃಷ್ಣರಾಜ ಮಾರುಕಟ್ಟೆಯನ್ನೇ ಅಡ ಇಟ್ಟಂತೆ ಭಾರತವನ್ನೇ ಅಡ ಇಡುವ ಪರಿಸ್ಥಿತಿ ಬಂದೀತು!

(article published in vijaya karnataka)

Monday, October 31, 2011

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ


'ಅಮೆರಿಕದ ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಕ್ಕೆ ಹಲವಾರು ಕಾರಣಗಳಿವೆ. ಸಾಮಾನ್ಯ ಜನರಿಗೆ ವೆಚ್ಚ ಕಡಿತ ಮಾಡುವುದಕ್ಕೆ ಹೇಳಿರುವಂಥ ಸಂದರ್ಭದಲ್ಲಿ ಬ್ಯಾಂಕರ್ ಗಳಿಗೆ, ಕಾರ್ಪೊರೇಟ್ ಗಳಿಗೆ ಲಕ್ಷಾಂತರ ಡಾಲರ್ ನೆರವು ಸಿಗುತ್ತಿರುವ ಕಾರಣದಿಂದಾಗಿ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿನ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಮೆರಿಕದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುವ ಭೀತಿಯಿದೆ. ಐರೋಪ್ಯ ರಾಷ್ಟ್ರಗಳಲ್ಲಿಯೂ ಇದೇ ಆತಂಕವಿದೆ. ಈ ಪ್ರತಿಭಟನೆ ನಿಲ್ಲಬೇಕು ಮತ್ತು ಸಮಸ್ಯೆ ನಿವಾರಣೆಯಾಗಬೇಕು ಎಂದಾದರೆ ವಿಶ್ವಾಸಾರ್ಹವಾದ, ಸದೃಢವಾದ ವ್ಯವಸ್ಥೆಯೊಂದರ ಅಗತ್ಯವಿದೆ....'

ಇದು ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಮೆರಿಕದಲ್ಲಿನ ಪ್ರತಿಭಟನೆಯ ಬಗ್ಗೆ ಕೊಟ್ಟಂಥ ಪ್ರತಿಕ್ರಿಯೆ. ಈ ಮಾತಿನಲ್ಲಿ ವಾಸ್ತವಾಂಶವಿದೆ  ಜೊತೆಗೆ ಒಂದು ರೀತಿಯ ನಿರ್ಲಕ್ಷ್ಯವಿದೆ. ಜನರು ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕಿದ್ದಾರೆ. ವಿವಿಧ ದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರ್ಪೊರೇಟ್ ಗಳ ಮೇಲೆ, ಅವುಗಳಿಗೆ ಪ್ರೋತ್ಸಾಹ ಕೊಡುತ್ತಿರುವಂಥ ಸರಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಕ್ತ ಆರ್ಥಿಕತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ನಿಜ, ಅಮೆರಿಕ, ಐರೋಪ್ಯ ರಾಷ್ಟ್ರಗಳಲ್ಲಿ ನಿರುದ್ಯೋಗದ ಭೀತಿಯಿದೆ. ಸಿಂಗ್ ಅವರ ಈ ಮಾತು ನಿಜ. ಆದರೆ ಭಾರತದ ದೃಷ್ಟಿಯಲ್ಲಿ ಅವರೇನೂ ಚಿಂತನೆ ನಡೆಸಿದಂತಿಲ್ಲ.

ಭಾರತಕ್ಕೆ ಕಾಲಿಟ್ಟಿದೆ
 ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ಕಾಣಿಸಿಕೊಂಡಿದ್ದ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಆಂದೋಲನ ಭಾರತದಲ್ಲಿಯೂ ಪ್ರತಿಧ್ವನಿಸುವುದಕ್ಕೆ ಶುರುವಾಗಿದೆ. ಇದರ ಮೊದಲ ಹಂತವಾಗಿ ಮುಂಬೈನ ದಾದರ್ ರೇಲ್ವೆ ನಿಲ್ದಾಣದಲ್ಲಿ ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳಾ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಿಯಂತ್ರಣ ಇಲ್ಲದಂತಹ ಆರ್ಥಿಕ ಉದಾರೀಕರಣ, ಮುಕ್ತ ಆರ್ಥಿಕ ನೀತಿಗಳು ಜಗತ್ತಿನೆಲ್ಲೆಡೆ ಸಮಸ್ಯೆಯಾಗಿವೆ.

  ಪಾಶ್ಚಾತ್ಯ ದೇಶಗಳು ಯಾವೆಲ್ಲ ಸಮಸ್ಯೆಗಳು ಎದುರಿಸುತ್ತಿವೆಯೋ ಅಂಥದ್ದೇ ಸಮಸ್ಯೆಗಳನ್ನು ಭಾರತವೂ ಸಹ ಎದುರಿಸುತ್ತಿದೆ. ಆರ್ಥಿಕ ನೀತಿಗಳು ಜನಸಾಮಾನ್ಯರ ಬದುಕನ್ನು ಭದ್ರಪಡಿಸುವಂತಿರಬೇಕು ಎಂದು ಪ್ರತಿಭಟನಕಾರರು ಆಗ್ರಹಿಸುತ್ತಿದ್ದಾರೆ. ಈಗಾಗಲೇ ಈ ಆಂದೋಲನ ಜಗತ್ತಿನಲ್ಲಿಡೀ ವ್ಯಾಪಿಸುತ್ತಿರುವುದು ಮತ್ತು ಭಾರತದಲ್ಲಿನ ಭ್ರಷ್ಟಾಚಾರದ ವಿರುದ್ಧದ ಸಮರದಿಂದಾಗಿ ಜನರು ಆರ್ಥಿಕ ಸಂಕಷ್ಟದ ಬಗ್ಗೆ ಜಾಗೃತಗೊಳ್ಳುತ್ತಿರುವುದರಿಂದ ಈ ಪ್ರತಿಭಟನೆ ಭಾರತದಾದ್ಯಂತವೂ ಮುಂದುವರಿಯುವುದು ಖಂಡಿತ.

ಭಾರತಕ್ಕೆ ಹೇಗೆ ಸಮಸ್ಯೆ?
ಪ್ರಸ್ತುತ ಭಾರತದ ಶೇ.50ರಷ್ಟು ಆರ್ಥಿಕತೆ ಬಹುರಾಷ್ಟ್ರೀಯ ಮಾರುಕಟ್ಟೆಯನ್ನು ನೆಚ್ಚಿಕೊಂಡಿದೆ. ಜೊತೆಗೆ ಇಲ್ಲಿನ ಬಹುರಾಷ್ಟ್ರೀಯ ಕಂಪನಿಗಳ ಅದಾಯವೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆಯೇ ಅವಲಂಬಿತ. ಒಂದುವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆ ತಲ್ಲಣಗೊಂಡರೆ ಅದರ ಪರಿಣಾಮ ನಮ್ಮಲ್ಲಿನ ಉದ್ಯೋಗಿಗಳ ಮೇಲಾಗುತ್ತದೆ. ಆರ್ಥಿಕತೆಯ ಮೇಲಾಗುತ್ತದೆ. 2008ರಲ್ಲಿ ಆರ್ಥಿಕ ಹಿಂಜರಿತ ಉಂಟಾದಾಗಲೇ ಸಾವಿರಾರು ಭಾರತೀಯ ನೌಕರರು ತಮ್ಮ ನೌಕರಿ ಕಳೆದುಕೊಂಡಿದ್ದರು. ನಂತರ ಐಟಿ ಉದ್ಯೋಗಿಗಳ ವೇತನವೂ ಬಹುಪಟ್ಟು ಕಡಿಮೆಯಾಗಿತ್ತು.

ಪ್ರಸ್ತುತ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಣಾಮದಿಂದಾಗಿ ಈಗಾಲೇ ಕೆಲವು ಸಾವಿರ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಐಬಿಎಂ ಒಂದರಲ್ಲಿಯೇ 1000ಕ್ಕೂ ಅಧಿಕ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಪರಿಸ್ಥಿತಿ ಹೀಗಿರುವಾಗ, ಇಂಥ ಪರಿಸ್ಥಿತಿಯನ್ನು ಉಂಟುಮಾಡಿರುವ ಆರ್ಥಿಕ ನೀತಿಯ ವಿರುದ್ಧ ಸಹಜವಾಗಿಯೇ ಆಕ್ರೋಶ ಉಂಟಾಗುತ್ತದೆ. ಹೀಗಾಗಿ ಪ್ರಸ್ತುತ ಮುಂಬೈಗೆ ಕಾಲಿಟ್ಟಿರುವ ಪ್ರತಿಭಟನೆ ಭಾರತದಾದ್ಯಂತ ಹರಡುವ ದಿನ ದೂರ ಇಲ್ಲ. ನಮ್ಮಲ್ಲೂ ಆರ್ಥಿಕ ನಿತಿಯನ್ನು ಪುನಶ್ಚೇತನಗೊಳಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಕಡಿಮೆ ಅವಲಂಬಿಸುವಂಥ ನೀತಿಗಳನ್ನು ರೂಪಿಸಲೇಬೇಕಾದ ಅನಿವಾರ್ಯತೆ ಖಂಡಿತಕ್ಕೂ ಎದುರಾಗಿದೆ.

Monday, October 24, 2011

ಅಮರಿಕೊಂಡ ಅಮೆರಿಕ


ಮುಕ್ತ ಆರ್ಥಿಕತೆ ಜಗತ್ತಿನಲ್ಲಿ ಅಂಬೆಗಾಲಿಟ್ಟಾಗಲೇ ಅದರ ಬಗ್ಗೆ ವ್ಯಾಮೋಹ ಗಾಢವಾಗಿತ್ತು. ಈ ವ್ಯಾಮೋಹದ ಪರಿಣಾಮವೇ ಅದು ಏಕಾಏಕಿ ದೈತ್ಯಾಕಾರ ತಾಳಿ ಬೆಳೆಯುವಂತಾಯಿತು. ಇದೀಗ ಅದೇ ಮುಕ್ತತೆ ವಿರುದ್ಧ ಕೂಗು ಆರಂಭವಾಗಿದೆ. ವಾಲ್ ಸ್ಟ್ರೀಟ್ ಗೇ ಮುತ್ತಿಗೆ ಹಾಕುವಂಥ ಆಂದೋಲನಗಳು ವೇಗ ಪಡೆದುಕೊಳ್ಳುತ್ತಿವೆ. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವ ಕೂಗು ಈ ಗುಂಪಿನಿಂದ ಕೇಳಿಸುತ್ತಿದೆ. ಈ ತಿಂಗಳಲ್ಲೇ ಅಮೆರಿಕದ ಸುಮಾರು 70 ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆದಿದೆ.
ಹಾಗಿದ್ದರೆ ಮುಕ್ತ ಆರ್ಥಿಕತೆಯ ವಿರುದ್ಧ ಜನರು ಒಟ್ಟಾಗುತ್ತಿದ್ದಾರೆಯೇ? ಅದರಿಂದಾದಂಥ ಸಮಸ್ಯೆಗಳು ಏನು? ಕಾರ್ಪೊರೇಟ್ ವಲಯಗಳಿಂದ ಲಾಭ ಆಗಿಲ್ಲವೇ?

ಹಿನ್ನೆಲೆ ಇಷ್ಟು:
ಪ್ರಜಾಪ್ರಭುತ್ವದ ಮೇಲೆ ಕಾರ್ಪೊರೇಟ್ ವ್ಯವಸ್ಥೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಅನಿಸತೊಡಗಿತು. ಇದರ ವಿರುದ್ಧ ಧ್ವನಿಯೆತ್ತಿದ್ದು ಕೆನಡಾ ಮೂಲದ ಅಡ್ ಬಸ್ಟರ್ಸ್ ಮೀಡಿಯಾ ಫೌಂಡೇಶನ್. ಪ್ರಜಾಪ್ರಭುತ್ವದ ಮೇಲಿನ ಕಾರ್ಪೊರೇಟ್ ಪ್ರಭಾವದ ವಿರುದ್ಧ ಹೋರಾಡುವುದಕ್ಕಾಗಿ ವಾಲ್ ಸ್ಟ್ರೀಟ್ ಗೆ ಶಾಂತಿಯುತವಾಗಿ ಮುತ್ತಿಗೆ ಹಾಕುವ ಪ್ರಸ್ತಾಪ ಮುಂದಿಟ್ಟಿತು. ಇದಕ್ಕೆ ವ್ಯಾಪಕ ಬೆಂಬಲ ಸಿಕ್ಕಿ ಇದೀಗ ವಾಲ್ ಸ್ಟ್ರೀಟ್ ಗೆ ಮುತ್ತಿಗೆ ಹಾಕುವ ಆಂದೋಲನಗಳು ನಡೆಯುತ್ತಿವೆ.

2008ರಲ್ಲಿ ಜಾಗತಿಕ ಆರ್ಥಿಕ ಮಹಾಪತನ ಎದುರಾದಾಗ ಒಂದು ಭರವಸೆ ಇತ್ತು. ಅದು- ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಗೆ ವಾಸ್ತವ ಸಮಸ್ಯೆ ಈಗ ಮನದಟ್ಟಾಗಿದೆ. ಪರಿಸ್ಥಿತಿ ಬದಲಾಗಲಿದೆ. ಹೊಸ ಕಾನೂನುಗಳನ್ನು ಎಲ್ಲ ರಂಗಕ್ಕೂ ಸಮನಾಗುವಂತೆ ರಚಿಸಲಿದ್ದಾರೆ. ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕದಂಥ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ.
ಕನಸುಗಳು ಸಾವಿರವಿದ್ದವು. ಪ್ರಯೋಜನವಾಗಲಿಲ್ಲ. ಜಗತ್ತು ಇದೀಗ ಮತ್ತೊಂದು ಆರ್ಥಿಕ ಕುಸಿತದ ಕಡೆಗೆ ವಾಲುತ್ತಿದೆ. ಗ್ರೀಸ್, ಇಟಲಿ ಮತ್ತು ಕೆಲವೊಂದು ಐರೋಪ್ಯ ರಾಷ್ಟ್ರಗಳಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಂಡಿದ್ದು, ಆಯಾ ದೇಶಗಳು ವೆಚ್ಚ ಕಡಿತದ ನಿರ್ಧಾರ ಮಾಡುತ್ತಿವೆ. ಆದರೆ, ಈ ನಿರ್ಧಾರದ ವಿರುದ್ಧ ಪ್ರಜೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಜಗತ್ತಿನೆಲ್ಲೆಡೆ...
ಜನರಿಂದ ಇಂಥದ್ದೊಂದು ಪ್ರತಿಕ್ರಿಯೆ ಬರುವುದಕ್ಕೆ ಕಾರಣ ಕಾರ್ಪೊರೇಟ್ ಕೇಂದ್ರಿತ ಆರ್ಥಿಕ ನೀತಿಗಳು. ಯಾವುದೇ ಒಂದು ಆರ್ಥಿಕ ನೀತಿಯನ್ನು ಅಮೆರಿಕ ರೂಪಿಸಿದರೂ ಅದರ ಕೇಂದ್ರ ಕಾರ್ಪೊರೇಟ್ ಸಂಸ್ಥೆಗಳು. ವಾಸ್ತವವಾಗಿ ಈ ಸಮಸ್ಯೆಯನ್ನು ಜಗತ್ತಿನ ಎಲ್ಲ ದೇಶಗಳೂ ಎದುರಿಸುತ್ತಿವೆ. ಹೀಗಾಗಿ ಅಮೆರಿಕದಲ್ಲಿ ಹುಟ್ಟಿಕೊಂಡಂಥ ಪ್ರತಿಭಟನೆಯ ಕಿಡಿ ಜಗದ್ ವ್ಯಾಪಿಯಾಗುತ್ತಿದೆ. ಆಕ್ಲೆಂಡ್, ಸಿಡ್ನಿ, ಹಾಂಕಾಂಗ್, ಪ್ಯಾರಿಸ್, ಮ್ಯಾಡ್ರಿಡ್, ಬರ್ಲಿನ್ ಮೊದಲಾದ ನಗರಗಳಿಗೆ ಇದು ವ್ಯಾಪಿಸಿದೆ. ಸೆ.17ರಂದು ಆರಂಭವಾದ ಹೋರಾಟಕ್ಕೆ ಈಗ ತಿಂಗಳ ಸಂಭ್ರಮ.

ಅಮೆರಿಕದ ನೀತಿಗಳು:
ಬಹುತೇಕ ದೇಶಗಳ ಆರ್ಥಿಕ ಗುಣಮಟ್ಟವನ್ನು ನಿರ್ಧರಿಸುವುದು ಅಮೆರಿಕದ ಸ್ಟ್ಯಾಂಡರ್ಡ್ಸ್ ಅಂಡ್  ಪೂರ್ಸ್ (ಎಸ್ ಎಪಿ) ಸಂಸ್ಥೆ. ಅಮೆರಿಕದ ಉದ್ದೇಶಗಳಿಗೆ ಅನುಸಾರವಾಗಿ ಕೆಲಸ ಮಾಡುವಂಥ ಈ ಸಂಸ್ಥೆ ಒಂದಷ್ಟು ಬ್ಯಾಂಕುಗಳ ರೇಟಿಂಗ್ ಕಡಿಮೆ ಮಾಡಿದರೆ ಸಾಕಲ್ಲ?  100 ಷೇರಿನ ಬೆಲೆ  70ಕ್ಕೆ ಇಳಿಕೆಯಾದರೂ ನಷ್ಟದ ಪ್ರಮಾಣ ಘೋರವಾಗುತ್ತದೆ. ಬ್ಯಾಂಕುಗಳು ರೇಟಿಂಗ್ ಕುಸಿತದಿಂದಾಗಿ ದಿವಾಳಿಯತ್ತ ಸಾಗುವುದನ್ನು ತಪ್ಪಿಸಬೇಕು ಎಂದು ಸರ್ಕಾರ ಆರ್ಥಿಕ ನೆರವು ನೀಡಲು ಮುಂದಾಗುತ್ತದೆ. ಸರ್ಕಾರದ ಬಳಿಯೂ ದುಡ್ಡಿಲ್ಲ ಎಂದಾದರೆ ಸಾಲ ಪಡೆಯಬೇಕು. ಇದಕ್ಕೇ ಕಾದು ಕುಳಿತಿರುತ್ತದೆ ಅಮೆರಿಕ. ಅಧಿಕ ಬಡ್ಡಿಯ ಸಾಲದ ರೂಪದಲ್ಲಿ ಅಮೆರಿಕ ನೆರವು ನೀಡುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದಕ್ಕಿರುವ ಒಂದೇ ಒಂದು ಉಪಾಯ ಎಂದರೆ ಪರ್ಯಾಯ ಆರ್ಥಿಕತೆಯನ್ನು ಬೆಳೆಸಿಕೊಳ್ಳುವುದು. ಇತರ ಸಂಪನ್ಮೂಲಗಳ ಕಡೆಗೆ ಗಮನ ಹರಿಸುವುದು. ಇದನ್ನೇ ಈಗ ಮತ್ತೆ ಬೆಂಬಲಿಸುವ ಪ್ರಯತ್ನಗಳು ನಡೆಯುತ್ತಿವೆ.

Saturday, October 22, 2011

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...


ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳು ಹಲವಾರು ಪದಕಗಳನ್ನು ಗೆದ್ದಾಗ ದೇಶದ ಕ್ರೀಡಾ ವಲಯದಲ್ಲಿಯೇ ಸಂಭ್ರಮ. ಭಾರತೀಯ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಭರವಸೆಗಳು ಹುಟ್ಟಿಕೊಂಡವು ಎಂಬ ಅದಮ್ಯ ವಿಶ್ವಾಸ. ಮುಂಬರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಅಮೋಘ ಸಾಧನೆ ಮಾಡುತ್ತದೆ ಎಂಬ ಕೋಟಿ ಭರವಸೆ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಈಗ ಬಂದಿರುವ ಫಲಿತಾಂಶ ಮಾತ್ರ ಇವೆಲ್ಲವನ್ನೂ ಸುಟ್ಟು ಹಾಕಿದೆ.

ಅಶ್ವಿನಿ ಅಕ್ಕುಂಜಿ, ಮನ್ ದೀಪ್ ಕೌರ್, ಸಿನಿ ಜೋಸ್, ಜುವಾನಾ ಮರ್ಮು, ಟಿಯಾನಾ ಮೇರಿ ಥಾಮಸ್, ಸೋನಿಯಾ, ಹರಿಕೃಷ್ಛಮುರಳೀಧರನ್, ಪ್ರಿಯಾಂಕಾ ಪನ್ವಾರ್ ಮೊದಲಾದ ಅಥ್ಲೀಟ್ ಗಳುನಿಷೇಧಿತ ಅನಬಾಲಿಕ್ ಸ್ಟಿರಾಯಿಡ್ ಮಿಥಾಂಡಿನನ್ ಸೇವಿಸಿದ್ದು ಖಾತ್ರಿಯಾದ ಕಾರಣ ನಿಷೇಧಕ್ಕೊಳಗಾದರು. ಮೊನ್ನೆ ಮೊನ್ನೆಯಷ್ಟೇ 19 ಕಬಡ್ಡಿ ಆಟಗಾರರು ಬಿ ಸ್ಯಾಂಪಲ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಶ್ವ ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಭಾರತೀಯ ಕಬಡ್ಡಿ ತಂಡಕ್ಕೆ ಈಗ ಅಲ್ಲಿಯೂ ಕತ್ತಲೆ!

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಆಕಾಂಕ್ಷೆ ಇಟ್ಟುಕೊಂಡಿರುವಂಥ ಹಲವಾರು ಭಾರತೀ ಕ್ರೀಡಾಳುಗಳು ಉದ್ದೀಪನ ಮದ್ದು ಸೇವನೆಯ ಸುಳಿಯಲ್ಲಿ ಸಿಲುಕುತ್ತಿದ್ದಾರೆ. ರಾಷ್ಟ್ರ ಮಟ್ಟದವರೆಗೂ ಯಾವುದೇ ಸಮಸ್ಯೆ ಎದುರಿಸದೇ ಇದ್ದವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಗಳ ಸರಣಿಯೇ ಎದುರಾಗುತ್ತದೆ. ತಾನು ಉದ್ದೀಪನ ಮದ್ದು ಸೇವಿಸಿದ್ದು ಆ ಕ್ರೀಡಾಳುವಿಗೆ ಗೊತ್ತೇ ಇರುವುದಿಲ್ಲ. ಅದನ್ನು ಪತ್ತೆ ಮಾಡುವ ಸಮರ್ಪಕ ನಿಯಮಗಳು ರಾಷ್ಟ್ರೀಯ ಮಟ್ಟದವರೆಗೂ ಇಲ್ಲವೇ ಇಲ್ಲ. ಇದರಿಂದಾಗ ಅಲ್ಲಿಯವರೆಗೂ ಉದ್ದೀಪನದ ಆಟವೇ ನಡೆಯುತ್ತದೆ!

 ಉದ್ದೀಪನದ ಸುಳಿಯಲ್ಲಿ ಕ್ರೀಡಾಳುಗಳು ಅದು ಹೇಗೆ ಸಿಲುಕುತ್ತಾರೆ ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಘಟನೆ 1: ಕ್ರೀಡಾಕೂಟಗಳನ್ನು ನೋಡುತ್ತಾ ಬೆಳೆದವಳು ಆಕೆ. ಹೈಸ್ಕೂಲ್ ಓದುತ್ತಿರುವ ಹುಡುಗಿ ತಾನೂ ಕ್ರೀಡಾಪಟುವಾಗಬೇಕು, ಏನಾದರೊಂದು ಸಾಧನೆ ಮಾಡಬೇಕು ಎಂಬ ಅದಮ್ಯ ಬಯಕೆಯನ್ನು ಹೊತ್ತು ಮೈದಾನಕ್ಕೆ ಕಾಲಿಟ್ಟಾಗ ಕೋಚ್ ಹೇಳಿದ ಮೊದಲ ಮಾತು ಆಕೆಯನ್ನು ಅರೆಕ್ಷಣ ದಂಗುಬಡಿಸಿತ್ತು- `ನಿನ್ನಲ್ಲಿ ಎನರ್ಜಿ ಕಡಿಮೆ ಇದೆಯಮ್ಮ. ಸ್ಪೋರ್ಟ್ಸ್ ಪರ್ಸನ್ಗೆ ಎಷ್ಟು ಎನರ್ಜಿ ಬೇಕು ಗೊತ್ತಾ? ಓಡ್ತಾ ಇರುವಾಗ ಬಿದ್ದು ಬಿಡ್ತೀಯಾ...'
`ನಾನೇನು ಮಾಡ್ಬೇಕು ಸರ್. ಸ್ಪೋರ್ಟ್ಸ್ ಇವೆಂಟಿನಲ್ಲಿ ಪಾರ್ಟಿಸಿಪೇಟ್ ಮಾಡ್ಲೇಬೇಕು' ಎಂದಾಕೆ ಹಠ ಹಿಡಿದಾಗ ಕೋಚ್- `ದಿನಾಲೂ ಬಿ-ಕಾಂಪ್ಲೆಕ್ಸ್ ಮಾತ್ರೆ ತಗೋ; ಬೆಳಗ್ಗೆ ಒಂದು, ರಾತ್ರೆ ಒಂದು; ಎನರ್ಜಿ ಬರುತ್ತೆ' ಎಂದರು.

ಸರಿ, ಆಕೆ ಮಾತ್ರೆ ತಿನ್ನೋದಕ್ಕೆ ಶುರು ಮಾಡಿದಳು. ದಿನಕ್ಕೆ ಎರಡು ಮಾತ್ರೆ ಸಾಕಗಲ್ಲ ಅಂತ ಒಂದು ಮಾತ್ರೆ ಹೆಚ್ಚು ಮಾಡಿದಳು. ದಿನಗಳೆದಂತೆ ಆಕೆಗೆ ಬಿಕಾಂಪ್ಲೆಕ್ಸ್ ಬದಲಿಗೆ ಅಲ್ಪ ಪ್ರಮಾಣದ ಡ್ರಗ್ಸ್ ಶುರುವಾಯಿತು. ಆಕೆಗೆ ತಾನೇನು ತಿನ್ನುತ್ತಿದ್ದೇನೆಂದೇ ಗೊತ್ತಿಲ್ಲ. ಕೋಚ್ ತಂದು ಕೊಟ್ಟಿದ್ರು- ಎನರ್ಜಿ ಬರುತ್ತೆ ಅಂತ. ಆಕೆ ಅದನ್ನೇ ನಂಬಿ ಡ್ರಗ್ಸ್ ತಗೆದುಕೊಳ್ಳೋದಕ್ಕೆ ಶುರು ಮಾಡಿದಳು.
ಘಟನೆ 2: ಆತ ಪದವಿ ವಿದ್ಯಾರ್ಥಿ. ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಖ್ಯಾತಿ ಪಡೆದಂಥ ಅಥ್ಲೀಟ್. ಅದೊಂದು ಕ್ರೀಡಾಕೂಟದ ಸಂದರ್ಭ; ಇನ್ನೇನು ಓಟದ ಸ್ಪರ್ಧೆ ಶುರುವಾಗುವುದಕ್ಕೆ ಕೆಲವೇ ಗಂಟೆ ಇದೆ ಎಂದಾಗ ಆ ಕ್ರೀಡಾಳು ಕುಸಿದು ಬಿದ್ದ. ಆತನಿಗೆ ಅದೇನು ಸಮಸ್ಯೆಯಾಗಿದೆಯೋ ಎಂಬ ಧಾವಂತದಲ್ಲಿ ಕೋಚ್, ವೈದ್ಯರು ಓಡಿ ಬಂದರು. ಆತನನ್ನು ಪರೀಕೆಗೆ ಒಳಪಡಿಸಿ ಅದೇನೋ ಇಂಜೆಕ್ಷನ್ ಚುಚ್ಚಿದರು. ಸ್ವಲ್ಪ ಹೊತ್ತಿನ ಬಳಿಕ ಆ ಕ್ರೀಡಾಳು ಸುಧಾರಿಸಿಕೊಂಡ. ಓಟದ ಸ್ಪರ್ಧೆ ನಡೆಯಿತು. ಈತನೇ ಚಿನ್ನದ ಪದಕ ಗೆದ್ದ. `ಆಗ ಕುಸಿದು ಬಿದ್ದಿದ್ದರೂ ಈತ ಗೆದ್ದಿದ್ದಾನೆ. ಅವನ ಸಾಮಥ್ರ್ಯ ಅಗಾಧ....' ಎಂದೆಲ್ಲ ಪ್ರಶಂಸೆಯ ಸುರಿಮಳೆಯೇ ಆತನ ಮೇಲಾಯಿತು.

ಹೌದು; ಆತ ತೆಗೆದುಕೊಂಡದ್ದು ಉದ್ದೀಪನ ಮದ್ದು. ವೈದ್ಯರೂ ಉದ್ದೀಪನ ಮದ್ದು ಕೊಡ್ತಾರಾ? ಅನ್ನಿಸಬಹುದು. ದುಡ್ಡು ಬರುತ್ತೆ ಅಂದ್ರೆ ಉಳಿದ ವಿಚಾರದ ಬಗ್ಗೆ ಯಾರು ತಲೆ ಕೆಡಿಸಿಕೊಳ್ತಾರೆ? ಕ್ರೀಡಾಳುಗಳಿಗೆ ಕೊಡುವಂಥ ಉದ್ದೀಪನ ಮದ್ದಿಗೇ ಸಾವಿರಾರು ರುಪಾಯಿ ಖರ್ಚು ಮಾಡುವ ಸಂಸ್ಥೆಗಳು ಭಾರತದಲ್ಲಿ ಎಷ್ಟಿವೆ ಎಂಬ ಸಮೀಕ್ಷೆ ನಡೆಸಿದರೆ ಆಘಾತಕಾರಿ ಫಲಿತಾಂಶ ಹೊರಬೀಳುವುದು ಖಂಡಿತ!
ಸಾಮಾನ್ಯವಾಗಿ ಕ್ರೀಡಾಳುಗಳಿಗೆ ಉದ್ದೀಪನ ಮದ್ದಿನ ಚಟ ಶುರುವಾಗುವುದು ಹೀಗೆಯೇ. ಆರಂಭದಲ್ಲಿ ಅದೇನೆಂಬ ಪ್ರಜ್ಞೆ ಇಲ್ಲದೆ ತೆಗೆದುಕೊಳ್ತಾರೆ. ಅದೇನೆಂದು ಗೊತ್ತಾಗುವ ಹೊತ್ತಿಗೆ ಅದರ ದಾಸರಾಗಿರುತ್ತಾರೆ. ಉದ್ದೀಪನ ಔಷಧಿ ಸೇವನೆಯನ್ನು ಬಿಡುವುದಕ್ಕೆ ಮನಸ್ಸಿದ್ದರೂ ಶರೀರ ಒಪ್ಪುವುದಿಲ್ಲ. ಬಿಕಾಂಪ್ಲೆಕ್ಸ್ ಮಾತ್ರೆಯಿಂದ ಡ್ರಗ್ಸ್ ಸೇವನೆ ಅಭ್ಯಾಸ ಶುರುವಾಗುತ್ತದೆ. ಒಂದು ಬಾರಿ ಶುರುವಾದರೆ ಅದನ್ನು ತಡೆಯುವುದು ಕಷ್ಟ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದರೆ ಮಾತ್ರ ಸರಕಾರದಿಂದ ಕ್ರೀಡಾಳುಗಳಿಗೆ ಸಿಗುವ ಸೌಲಭ್ಯ ಸಿಗುತ್ತದೆ ಎಂಬ ಒತ್ತಡವೂ ಇದಕ್ಕೆ ಪ್ರೇರೇಪಣೆ ಕೊಡುತ್ತದೆ.

ಯಾಕೆ ಹೀಗೆ?
ಕಾಲೇಜುಗಳಿರಬಹುದು, ಕ್ರೀಡಾ ಸಂಘಟನೆಗಳಿರಬಹುದು ಒಂದು ಕ್ರೀಡಾಕೂಟದಲ್ಲಿ ತಮ್ಮ ಸಂಸ್ಥೆಗೆ ಒಂದಷ್ಟು ಪದಕ ಬಂದರೆ ಸಾಕು ಎಂದು ಭಾವಿಸುತ್ತವೆ. ಕಾಲೇಜುಗಳಂತೂ ವಿಶ್ವವಿದ್ಯಾಲಯ ಮಟ್ಟದಲ್ಲಿ ತಮ್ಮ ಹೆಸರು ಮಿಂಚಬೇಕೆಂದು ಬಯಸುತ್ತವೆ. ಇವರ್ಯಾರೂ ಕ್ರೀಡಾಳುಗಳ ಒಳಿತಿನ ಕಡೆ ಗಮನ ಹರಿಸುವುದಿಲ್ಲ. ಹಾಗಂತ ಎಲ್ಲಾ ಕಾಲೇಜುಗಳೂ ಹೀಗೇ ಎಂಬುದು ನನ್ನ ಅಭಿಪ್ರಾಯವಲ್ಲ. ಇದಕ್ಕೆ ಅಪವಾದಗಳೂ ಇರಬಹುದು. ಆದರೆ ಬಹುತೇಕ ಕಾಲೇಜುಗಳಲ್ಲಿ ಆಗುವುದು ಇದೇ. `ಎನರ್ಜಿ ಬೇಕು' ಎಂಬ ಸಬೂಬಿನೊಂದಿಗೆ ಉದ್ದೀಪನ ಮದ್ದು ಸೇವಿಸುವುದಕ್ಕೆ ಪ್ರಚೋದನೆ ಪಡೆಯುವಂಥ ಕ್ರೀಡಾಳುಗಳಿಗೆ ಅದರ ಬಗ್ಗೆ ಅರಿವು ಮೂಡಿಸುವುದಕ್ಕೆ ಯಾರೂ ಇರುವುದಿಲ್ಲ. ಒಂದು ವೇಳೆ ಇದಕ್ಕೆ ವಿರೋಧಿಸಿದರೋ ಅಲ್ಲಿಗೆ ಅವರ ಕ್ರೀಡಾ ಭವಿಷ್ಯ ಕೊನೆಯಾಯಿತು ಎಂದೇ ಅರ್ಥ.

ಸದಾ ಉದ್ದೀಪನ ಮದ್ದು ಸೇವಿಸುತ್ತಾ ಬಂದಂಥ ಕ್ರೀಡಾಳುಗಳು ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋದಾಗ ಸಿಕ್ಕಿ ಬೀಳುತ್ತಾರೆ. ರಾಷ್ಟ್ರ ಮಟ್ಟದವರೆಗೂ ಉದ್ದೀಪನ ಮದ್ದು ಸೇವನೆಯ ಪರೀಕ್ಷೆಯೇ ಇಲ್ಲ. ಇದ್ದರೂ ಅದು ಸಮರ್ಪಕವಾಗಿಲ್ಲ. ಒಂದು ವೇಳಿ ಉದ್ದೀಪನ ಮದ್ದು ಸೇವಿಸಿದ್ದು ಗೊತ್ತಾದರೂ ಯಾವ ರೀತಿ ಪ್ರಭಾವ ಬೀರಿ ಅದರಿಂದ ಪಾರಾಗಬೇಕು ಎಂಬುದು ಕಾಲೇಜುಗಳಿಗೋ, ಕ್ರೀಡಾಸಂಸ್ಥೆಗಳಿಗೋ, ಕೋಚ್ಗಳಿಗೋ ಗೊತ್ತಿರುತ್ತದೆ. ವಶೀಲಿಯ ಮುಂದೆ ಯಾವ ಪರೀಕ್ಷೆ ಸಮರ್ಪಕವಾಗಿ ಕೆಲಸ ಮಾಡುತ್ತದೆ? ಇವರಲ್ಲರ ಆಟದಲ್ಲಿ ಕ್ರೀಡಾಳುಗಳ ಜೀವನದ ಆಟ ಮಂಕಾಗುತ್ತಿದೆ. ಉದ್ದೀಪನ ಮದ್ದು ಸೇವನೆಯ ಆಪತ್ತಿನ ಬಗ್ಗೆ ಕೇವಲ ಕ್ರೀಡಾಳುಗಳಲ್ಲಿ ಅರಿವು ಮೂಡಿಸಿದರೆ ಸಾಕಾಗದು, ಕಾಲೇಜುಗಳು, ಕ್ರೀಡಾಸಂಸ್ಥೆಗಳಲ್ಲಿನ ಕೋಚ್ಗಳಲ್ಲಿಯೂ ಈ ಬಗ್ಗೆ ಅರಿವು ಮೂಡಿಸಬೇಕು. ತಮ್ಮ ಸಂಸ್ಥೆಗೆ ಪದಕ ಬೇಕೆಂಬ ಹಪಾಹಪಿಯಲ್ಲಿ ಕ್ರೀಡಾಳುಗಳಿಗೆ ಉದ್ದೀಪನ ಮದ್ದು ಕೊಟ್ಟು ಅವರ ಜೀವನವನ್ನನು ಹಾಳು ಮಾಡಬಾರದು ಎಂಬ ಭಾವನೆ ಅವರ ಮನಸ್ಸಿನಲ್ಲಿ ಉದಿಸಬೇಕು. ಭಾರತದಲ್ಲಿನ ಬಹಳಷ್ಟು ಕ್ರೀಡಾಳುಗಳು ಇಂದು ಉದ್ದೀಪನ ಔಷಧಿ ಸೇವನೆಯ ಚಟವನ್ನು ಅಂಟಿಸಿಕೊಂಡಿದ್ದಾರೆ. ಬಹುಶಃ ಇವರನ್ನು ಈ ಚಟದಿಂದ ಬಿಡಿಸುವುದು ಸ್ವಲ್ಪ ಕಷ್ಟವೇ! ಆದರೆ ಭವಿಷ್ಯದಲ್ಲಿ ಕ್ರೀಡಾಳುಗಳು ಈ ಚಟದ ದಾಸರಾಗದಂತೆ ನೋಡಿಕೊಳ್ಳಬಹುದು- ಸರಕಾರ, ಶಾಲೆ-ಕಾಲೇಜುಗಳು, ಕ್ರೀಡಾ ಸಂಸ್ಥೆಗಳು, ಕೋಚ್ಗಳು ಮನಸು ಮಾಡಿದಲ್ಲಿ! ಕ್ರೀಡೆ ಎಂದರೆ ಪದಕ ಗೆಲ್ಲಲೇಬೇಕು ಎಂಬ ಮನೋಭಾವವನ್ನು ಇವರು ತ್ಯಜಿಸಿದಲ್ಲಿ!

ನಿಷೇಧಿತ ಡ್ರಗ್ಸ್
ಸ್ಟಿಮ್ಯುಲೆಂಟ್ಸ್ (ಅಡ್ರಾಫಿನಿಲ್, ಕೊಕೇನ್, ಮೊಡಾಫಿನಿಲ್, ಪೆಮೋಲಿನ್, ಸೆಲೆಜಿಲೈನ್), ನಾರ್ಕೋಟಿಕ್ ಅನಾಲ್ಜೆಸಿಕ್ಸ್ (ಬೂಪ್ರೆನೋರ್ಫಿನ್, ಡೆಕ್ಸ್ ಟ್ರೋಮೋರಮೈಡ್, ಹೆರಾಯಿನ್, ಮಾರ್ಫಿನ್, ಪೆಥೆಡಿನ್), ಕ್ಯಾನ್ನಬಿನಾಯಿಡ್ಸ್ (ಹಶೀಶ್, ಮರಿಜುವಾನಾ), ಅನಬಾಲಿಕ್ ಏಜೆಂಟ್ಸ್ (ಡ್ರೋಸ್ಟನೋಲೋನ್, ಮೆಟೆನೋಲೋನ್, ಡಿಎಚ್ ಇಎ, ಟೆಸ್ಟೋಸ್ಟೀರೋನ್), ಪೆಪ್ಟೈಡ್ ಹಾರ್ಮೋನ್ಸ್ (ಕಾರ್ಟಿಕೋಟ್ರೋಫಿನ್ಸ್), ಬಿ-2 ಅಗಿನಿಸ್ಟ್ (ರಿಪ್ರೋಟೆರೋಲ್ ಹೈಡ್ರೋಕ್ಲೋರೈಡ್), ಮಾಸ್ಕಿಂಗ್ ಏಜೆಂಟ್ಸ್ (ಡೆಕ್ಸ್ ಟ್ರಾನ್), ಗ್ಲೂಕೋಕಾರ್ಟಿಕೋಸ್ಟೀರಾಯಿಡ್ಸ್ (ಡೆಕ್ಸಾಮೆಥಸೋನ್), ಎವೆಲ್ಲವೂ ಅಥ್ಲೆಟ್ ಗಳಿಗೆ ನಿಷೇಧಿತ ದ್ರವ್ಯಗಳು.

Sunday, October 16, 2011

ಜನಪ್ರಿಯತೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ ವೃತ್ತಿಪರತೆ!


'ಪ್ರತಿಯೊಂದು ಪಂದ್ಯವನ್ನೂ ಆಡ್ಬೇಕು, ಪ್ರತಿಯೊಂದನ್ನೂ ಗೆಲ್ಲಬೇಕು'! ಕ್ರಿಕೆಟ್ ಬಗ್ಗೆ ಭಾರತೀಯ ಪ್ರೇಕ್ಷಕನ ನಿರೀಕ್ಷೆಯಿದು. ಹಲವು ದಶಕಗಳಿಂದ ಭಾರತೀಯ ಜೀವನದ ಅವಿಭಾಜ್ಯ ಅಂಗವೋ ಎಂಬಷ್ಟು ಮಾನ್ಯತೆ ಪಡೆದಿರುವಂಥ ಕ್ರಿಕೆಟ್ ನಿಂದ ಈ ಮಟ್ಟದ ನಿರೀಕ್ಷೆ ಮಾಡಿದಲ್ಲಿ ತಪ್ಪೇನು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಬಹುದು. ಭಾರತೀಯ ಕ್ರಿಕೆಟ್ ತಂಡ ಹೆಚ್ಚು ಸಮರ್ಥ ಫಲತಾಂಶ ನೀಡಲು ಯಶಸ್ವಿಯಾಗದೇ ಇರುವುದಕ್ಕೆ ವೇಳಾಪಟ್ಟಿಯೇ ಕಾರಣ ಎಂಬುದು ಖಂಡಿತ.


ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಂದು ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಗಳನ್ನು ಆಡಿತು. ಅದಾದ ಕೆಲವೇ ದಿನಗಳಲ್ಲಿ ಶುರುವಾಯಿತು ಛಾಂಪಿಯನ್ಸ್ ಲೀಗ್. ಈ ಲೀಗ್ ಮುಗಿಯುವುದೇ ತಡ ಮತ್ತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿ!

ಈ ಸರಣಿಗಳ ನಡುವೆ ಬಿಡುವೆಲ್ಲಿದೆ ಸ್ವಾಮಿ? ಬಿಡುವಿಲ್ಲದ ದಿನಚರಿಯ ಹಿನ್ನೆಲೆಯಲ್ಲಿ ಜನರು ಟಿ20 ಪಂದ್ಯಗಳನ್ನು ಇಷ್ಟಪಡುತ್ತಾರೆ ನಿಜ. ಇಂದು ಟಿ20 ಪಂದ್ಯಗಳೇ ಹೆಚ್ಚಾಗಿವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಅದರಿಂದ ಬರುವ ಹಣ! ಟಿ20 ಪಂದ್ಯಗಳ ಆಯೋಜನೆಯಿಂದ ಎಷ್ಟು ಹಣ ಬರಬಹುದು ಎಂಬ ಆಲೋಚನೆ ಬಿಸಿಸಿಐ ಮನಸ್ಸಿನಲ್ಲಿದ್ದರೆ, ಇವುಗಳಿಂದ ತಾವೆಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಆಟಗಾರರು. ಟಿ20 ಪಂದ್ಯಗಳಿಂದ ಹಣ ಬರುತ್ತೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದರೆ ಹೆಸರು ಬರುತ್ತೆ. ಎರಡು ಚಿನ್ನದ ತಟ್ಟೆಗಳನ್ನು ಮುಂದಿಟ್ಟರೆ, ಎರಡನ್ನೂ ತೆಗೆದುಕೊಳ್ಳುವ ಬಯಕೆ ಹುಟ್ಟಿಕೊಳ್ಳುತ್ತದಲ್ಲವೇ? ಅಂತಾಗಿದೆ ಕ್ರಿಕೆಟಿಗರ ಮನಃಸ್ಥಿತಿ.

ಗೆಲ್ಲುವುದಕ್ಕೆ ಕಲೆ ಬೇಕು
ಟಿ20 ಪಂದ್ಯಗಳಲ್ಲಿ 20 ಓವರ್ ನಲ್ಲಿ 200 ರನ್ ಮಾಡುವುದಕ್ಕೂ ನಮ್ಮ ಆಟಗಾರರು ಸಮರ್ಥರಾಗಿದ್ದಾರೆ. ಏಕದಿನಕ್ಕೆ ಬಂದರೆ 50 ಓವರ್ ಗಳಲ್ಲಿ 300 ರನ್ ಒಟ್ಟುಗೂಡಿಸುವುದಕ್ಕೆ ತಿಣುಕಾಡುತ್ತಾರೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಸತತ ಐದು ದಿನಗಳು ಆಡುವ ಮಾತು ಹಾಗಿರಲಿ, 200 ರನ್ ಮಾಡುವುದೂ ಕಷ್ಟವೇ! ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗಿನ ಭಾರತದ ತಂಡದ ಇಂಗ್ಲೆಂಡ್ ಪ್ರವಾಸ.

ಒಂದು ತಂಡ ಸ್ವದೇಶದಲ್ಲಿ ಗೆಲ್ಲುವುದು ಸುಲಭ. ಕಾರಣ- ಪಿಚ್ ನ ಪರಿಚಯ ಇರುತ್ತೆ. ಇದಕ್ಕಿಂತಲೂ ಮುಖ್ಯವಾಗಿ ಸ್ವದೇಶದ ಹವಾಗುಣಕ್ಕೆ ದೇಹ ಹೊಂದಿಕೊಂಡಿರುತ್ತದೆ. ವಿದೇಶಕ್ಕೆ ಪ್ರವಾಸ ಹೋದಾಗ ಮೊದಲನೆಯ ಸಮಸ್ಯೆ ಎದುರಾಗುವುದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ. ಮೊದಲಾದರೆ ಒಂದು ಕ್ರಿಕೆಟ್ ತಂಡದ ವಿದೇಶ ಪ್ರವಾಸ ಎಂದರೆ- ಆಯಾ ದೇಶಕ್ಕೆ ಹೋಗಿ ಅಲ್ಲಿ ಹಲವಾರು ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಸರಣಿ ಶುರುವಾಗುತ್ತಿತ್ತು. ಈಗ ಹಾಗಿಲ್ಲ; ಸರಣಿಗಳ ಸಾಲಿನಲ್ಲಿ ಅಭ್ಯಾಸ ಪಂದ್ಯಗಳಿಗೆ ಬಿಡುವಿಲ್ಲ.

ಪ್ರತಿಯೊಂದು ದೇಶದ ಪಿಚ್ ಕೂಡಾ ವಾತಾವರಣದಂತೆಯೇ ಭಿನ್ನವಾಗಿರುತ್ತದೆ. ಇನ್ನು ಭಾರತಕ್ಕೆ ಬಂದರೆ ಇಲ್ಲಿನ ಪ್ರತಿಯೊಂದು ಪಿಚ್ ಸಹ ಒಂದಕ್ಕಿಂತ ಇನ್ನೊಂದು ಭಿನ್ನ. ಯಾವುದೇ ಪಿಚ್ ನಲ್ಲಿ ಆಡಬೇಕಾದರೆ ಮೊದಲು ಚೆಂಡು ಹೇಗೆ ಟರ್ನ್ ತೆಗೆದುಕೊಳ್ಳುತ್ತದೆ, ಹೇಗೆ ಸ್ವಿಂಗ್ ಆಗುತ್ತದೆ, ಯಾವುದಾದರೂ ಹಂತದಲ್ಲಿ ಪಿಚ್ ನಲ್ಲಿ ಬದಲಾವಣೆಯಾಗುತ್ತದೆಯೇ ಎಂಬೆಲ್ಲ ವಿಚಾರಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಈ ಅಭ್ಯಾಸ ಬ್ಯಾಟ್ಸ್ ಮನ್ ಗೂ ಬೇಕು, ಬೌಲರ್ ಗಳಿಗೂ ಬೇಕು. ಭಾರತ ತಂಡ ಇಂಗ್ಲೆಂಡ್ ಗೆ ಪ್ರವಾಸ ಹೋದಾಗ ಆಡಿದ್ದು ಒಂದೇ ಒಂದು ಅಭ್ಯಾಸ ಪಂದ್ಯ. ಪ್ರಸ್ತುತ ಭಾರತದಲ್ಲಿರುವ ಇಂಗ್ಲೆಂಡ್ ತಂಡ ಕೂಡಾ ಆಡಿದ್ದು ಒಂದೇ ಅಭ್ಯಾಸ ಪಂದ್ಯ. ಎರಡೂ ತಂಡಗಳು ಆಯಾ ದೇಶದ ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ವಿಫಲವಾಗಿದ್ದು ಎರಡೂ ಸರಣಿಯಲ್ಲಿ ಗೊತ್ತಾಗುತ್ತದೆ.

ಹವಾಮಾನಕ್ಕೆ, ಪಿಚ್ ನ ಟರ್ನ್ ಗಳಿಗೆ ಯಾವ ಆಟಗಾರ ತನ್ನನ್ನು ಹೊಂದಿಸಿಕೊಳ್ಳುತ್ತಾನೆಯೋ ಅವನು ಯಶಸ್ವಿಯಾಗುತ್ತಾನೆ. ರಾಹುಲ್ ದ್ರಾವಿಡ್ ಯಾವುದೇ ದೇಶದ ಪಿಚ್ ನಲ್ಲಿಯೂ ಸಮರ್ಥವಾಗಿ ಆಡಬಲ್ಲರು ಎಂದರೆ ಅದಕ್ಕೆ ಕಾರಣ ಪ್ರತಿಯೊಂದು ಪಿಚ್ ನ ಬಗ್ಗೆಯೂ ಅವರಿಗಿರುವಂಥ ಅನುಭವ. ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ ಅವರಂಥ ಆಟಗಾರರು ಹಲವು ವರ್ಷಗಳ ಕಾಲ ಕ್ರಿಕೆಟ್ ತಂಡದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರಲ್ಲಿನ ಈ ಗುಣ ಮತ್ತು ಕಲಾತ್ಮಕತೆ.

ವೃತ್ತಿಪರತೆ ಕಳೆದು ಹೋಗಿದೆ
ಟಿ20 ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಏಕದಿನ, ಟೆಸ್ಟ್ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ ಎಂದರೆ ಅದಕ್ಕೆ ಕಾರಣ ಅವರಲ್ಲಿರುವ ವೃತ್ತಿಪರತೆಯ ಕೊರತೆ. ಪ್ರತಿಯೊಂದು ಪ್ರಕಾರದ ಕ್ರಿಕೆಟ್ ಕೂಡಾ ಅದರದ್ದೇ ಆದಂಥ ಕಲಾತ್ಮಕತೆಯನ್ನು ಹೊಂದಿದೆ. ಟಿ20 ಆಡಿದಂತೆ ಏಕದಿನವನ್ನು ಆಡಲಾಗುವುದಿಲ್ಲ; ದೀರ್ಘಕಾಲ ನೆಲಕಚ್ಚಿ ನಿಂತುಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಟೆಸ್ಟ್ ಆಡುವುದಕ್ಕಾಗುವುದಿಲ್ಲ. ಯುವಕ್ರಿಕೆಟಿಗರಲ್ಲಿ ಶೇ.90ಕ್ಕಿಂತಲೂ ಅಧಿಕ ಆಟಗಾರರಿಗೆ ನೆಲಕಚ್ಚಿ ಆಡುವುದಕ್ಕೆ ಗೊತ್ತೇ ಇಲ್ಲ. ಅವರು ಅದರ ಅನುಭವವನ್ನೂ ಪಡೆದಿಲ್ಲ; ಅದಕ್ಕೆ ಅವಕಾಶವೂ ಸಿಕ್ಕಿಲ್ಲ. ಯಾಕೆಂದರೆ ಟಿ20ಯ ಭರಾಟೆಯಲ್ಲಿ ಟೆಸ್ಟ್ ಪಂದ್ಯಾವಳಿಗಳೇ ಕಡಿಮೆ.

ಇದಕ್ಕೆ ನಿಜವಾಗಿ ಆಟಗಾರರು ಕಾರಣರಲ್ಲ. ಬಿಸಿಸಿಐಯನ್ನು ಇದಕ್ಕೆ ನೇರವಾಗಿ ಹೊಣೆಯಾಗಿಸಬಹುದು. ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಬಿಸಿಸಿಐ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಲ್ಲಿ ಬಿಸಿಸಿಐ ವಿರುದ್ಧ ಧ್ವನಿಯೆತ್ತುವ ಸಾಮರ್ಥ್ಯ ಯಾವ ಕ್ರಿಕೆಟ್ ಸಂಸ್ಥೆಗೂ ಇಲ್ಲ; ಸ್ವತಃ ಐಸಿಸಿಗೂ! ಟಿ20ಯಿಂದ ವ್ಯಾಪಕ ಹಣ ಹರಿದು ಬರುತ್ತದೆ; ಬಿಸಿಸಿಐಯ ಶ್ರೀಮಂತಿಕೆ ಐಸಿಸಿಗೂ ಅಗತ್ಯವಿದೆ. ಇಂತಿರುವಾಗ ಸೊಲ್ಲೆತ್ತುವವರು ಯಾರು?

ಹೀಗಾಗಿಯೇ ಕ್ರಿಕೆಟಿಗರನ್ನು ಹೆಚ್ಚೆಚ್ಚು ಟಿ20 ಕ್ರಿಕೆಟ್ ಆಡುವಂತೆ ಒತ್ತಡ ಹೇರುತ್ತಿದೆ ಬಿಸಿಸಿಐ. ಹಿಂದೆಲ್ಲ ಆಟಗಾರರು ಸ್ವತಃ ವಿಶ್ರಾಂತಿ ಬೇಕೆಂದು ಹೇಳುತ್ತಿದ್ದರು. ಆದರೆ ಇಂದು ಯಾವ ಆಟಗಾರರೂ ಸಹ ವಿಶ್ರಾಂತಿ ಬೇಕೆಂದು ಸ್ವಇಚ್ಛೆಯಿಂದ ಹೇಳುತ್ತಿಲ್ಲ. ಯಾಕೆಂದರೆ ಎಷ್ಟು ಆಟ ಆಡುವುದಕ್ಕೆ ಅವಕಾಶ ಸಿಗಬಹುದು ಎಂಬ ಕಲ್ಪನೆ ಅವರಲ್ಲಿಲ್ಲ. ದೀರ್ಘ ಅನುಭವ ಇಲ್ಲದ ಹೊರತಾಗಿ ವೃತ್ತಿಪರತೆ ಬೆಳೆಯುವುದಕ್ಕೆ ಸಾಧ್ಯವೂ ಇಲ್ಲ. ಮೂರ್ನಾಲ್ಕು ಪಂದ್ಯಗಳಲ್ಲಿ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವುದಕ್ಕೆ ಸಾಧ್ಯವೂ ಇಲ್ಲ.
ಕನಿಷ್ಠ ಬೇರೆ ಬೇರೆ ಸರಣಿಗೆ ಬೇರೆ ಬೇರೆ ಆಟಗಾರರಿಗೆ ಅವಕಾಶ ಕೊಟ್ಟರಾದರೂ ಪ್ರತಿಯೊಬ್ಬರಿಗೂ ಸ್ವಲ್ಪ ವಿಶ್ರಾಂತಿ ಸಿಕ್ಕೀತು. ಆದರೆ ಇತ್ತೀಚೆಗಿನ ಸರಣಿಯನ್ನೇ ಗಮನಿಸಿದರೆ ಶೇಕಡಾ 75ಕ್ಕಿಂತಲೂ ಅಧಿಕ ಆಟಗಾರರು ಪ್ರತಿಯೊಂದು ಸರಣಿಯಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಇವರಿಗೆ ಸರಣಿಯ ಪಂದ್ಯಗಳೇ ಅಭ್ಯಾಸ ಪಂದ್ಯಗಳಂತಾಗಿರುವಾಗ, ಆಡುವ ಒಂದೇ ಪಂದ್ಯದಲ್ಲಿಯೇ ತಮ್ಮೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಲೇಬೇಕಾದ ಒತ್ತಡವನ್ನು ಹೊಂದಿರುವಾಗ, ಓದದೇ ಪರೀಕ್ಷೆ ಪಾಸಾಗಬೇಕು ಎಂಬಂಥ ಸ್ಥಿತಿಯಿರುವಾಗ ಎಲ್ಲ ಪಂದ್ಯಗಳಲ್ಲೂ ಗೆಲುವನ್ನು ಹೇಗೆ ತಾನೇ ನಿರೀಕ್ಷಿಸುವುದಕ್ಕೆ ಸಾಧ್ಯ? ಆಟಗಾರರೂ ಸ್ವಲ್ಪ ಉಸಿರಾಡುವುದಕ್ಕೆ ಅವಕಾಶ ಸಿಗಲಿ, ಒಂದಷ್ಟು ಅಭ್ಯಾಸ ಮಾಡುವಂಥ ಮನಸ್ಸು ಆಟಗಾರರಿಗೆ ಬರಲಿ. ಆದರೆ ಜನಪ್ರಿಯತೆಯ ಅಲೆಯಲ್ಲಿ ವೃತ್ತಿಪರತೆ ಎಂಬುದು ನಶಿಸಿ ಹೋಗುತ್ತಿರುವಾಗ ಇದು ಸಾಕಾರಗೊಂಡೀತೆ?