ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಕರ್ನಾಟಕ ಆಡಳಿತಾತ್ಮಕ ಸೇವಾ(ಕೆಎಎಸ್) ಪರೀಕ್ಷೆಯ ಪಠ್ಯ ಬದಲಾಗುತ್ತಿದೆ. ಅಂದರೆ ಅದು ಭಾರತೀಯ ಆಡಳಿತಾತ್ಮಕ ಸೇವಾ (ಐಎಎಸ್) ಪರಿಕ್ಷೆಯ ಮಟ್ಟಕ್ಕೆ ಬರುತ್ತಿದೆ. ಆದರೆ ಐಎಎಸ್, ಕೆಎಎಸ್... ಮುಂತಾದಕ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಹೆಚ್ಚಿನವರಲ್ಲಿ ಅಳುಕಿದೆ. ಹೇಗೆ ಎದುರಿಸುವುದು ಎಂಬ ಗೊಂದಲದಲ್ಲಿದೆ ಯುವ ಸಮಾಜ.
       ಇಂತಿರುವಾಗ ಕೆಎಎಸ್ ಕೂಡಾ ಐಎಎಸ್ ಮಟ್ಟದ ಪಠ್ಯ ಹೊಂದಿದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ನಿರ್ಧರಿಸುವ ಅಭ್ಯರ್ಥಿಗಳು ಯಾವ ರೀತಿಯ ಸಿದ್ಧತೆ ನಡೆಸಬೇಕು? ಸ್ಪರ್ಧಾತ್ಮಕ ಪರೀಕ್ಷೆಗಳ ಬಗೆಗಿನ ಅಳುಕನ್ನು ಅಭ್ಯರ್ಥಿಗಳ ಮನಸ್ಸಿನಿಂದ ತೆಗೆದು ಹಾಕುವ ಬಗೆ ಹೇಗೆ? ಇವೇ ಮುಂತಾದ ವಿಚಾರಗಳ ಬಗ್ಗೆ ಬೆಂಗಳೂರಿನ ವಿಜಯನಗರದ ಎಂ ಸಿ ಬಡಾವಣೆಯಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಕೇಂದ್ರ ಆಸ್ಪೈರ್ ಸ್ಟಡಿ ಸೆಂಟರ್ನ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್ ದಡ್ಡೆ ಅವರನ್ನು `ಕನ್ನಡಪ್ರಭ' ಮಾತಾಡಿಸಿತು.

ಶಿವಶಂಕರ್ ದಡ್ಡೆ 
- ಕೆಎಎಸ್ ಪಠ್ಯ ಯಾವಾಗಿಂದ ಬದಲಾಗುತ್ತಿದೆ?
ಮುಂದಿನ ನೋಟಿಫಿಕೇಶನ್, ಅಂದರೆ ಪ್ರಿಲಿಮಿನರಿ ಪರೀಕ್ಷೆಗೆ ಸೇರ್ಪಡೆಯಾಗುವ ಮುಂದಿನ ಬ್ಯಾಚ್ನ ಅಭ್ಯರ್ಥಿಗಳಿಗೆ ಹೊಸ ಪಠ್ಯ ಇರುವ ಸಾಧ್ಯತೆಗಳಿವೆ. ಈಗಾಗಲೇ ಹೊಸ ಪಠ್ಯ ಸಿದ್ಧವಾಗಿದೆ. ಆ ಪಠ್ಯ ಜಾರಿಯಾಗುವುದಷ್ಟೇ ಬಾಕಿ. ಸುಮಾರು 200 ಹುದ್ದೆಗಳಿಗೆ ಸರಕಾರ ಈಗಾಗಲೇ ಅನುಮತಿ ಕೊಟ್ಟಿದೆ. ಈ ತಿಂಗಳ ಕೊನೆಯಲ್ಲಿ ಅಥವಾ ಮುಂದಿನ ತಿಂಗಳಲ್ಲಿ ಈ ಹುದ್ದೆಗಳಿಗಾಗಿನ ಪರೀಕ್ಷೆಗಳಿಗೆ ನೋಟಿಫಿಕೇಶನ್ ಆಗುವ ಸಾಧ್ಯತೆಗಳಿವೆ.

- ಪಠ್ಯ ಬದಲಾವಣೆಯ ಉದ್ದೇಶ?
ಐಎಎಸ್ ಅನ್ನೇ ಮಾದರಿಯಾಗಿಟ್ಟುಕೊಂಡು ಕೆಎಎಸ್ ಪಠ್ಯಕ್ರಮ ರೂಪಿಸಲಾಗುತ್ತಿದೆ. ಎರಡೂ ಪರೀಕ್ಷೆಗಳ ಪಠ್ಯಗಳು ಒಂದೇ ಮಾಡರಿಯಲ್ಲಿದ್ದರೆ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆ ಎಂಬ ದೃಷ್ಟಿಯಿಂದ ಪಠ್ಯ ಬದಲಾವಣೆ ಮಾಡಲಾಗುತ್ತಿದೆ. ಈಗ ಐಎಎಸ್ನಲ್ಲಿ ಪ್ರಿಲಿಮಿನರಿ ಮತ್ತು ಮೈನ್ ಎಕ್ಸಾಮ್ ಅಂತ ಇರುತ್ತೆ. ಪ್ರಿಲಿಮಿನರಿಯಲ್ಲಿ ಪೇಪರ್ 1 (200 ಅಂಕಗಳು) ಮತ್ತು ಪೇಪರ್ 2 (200) ಅಂಕಗಳು. ಪೇ1ರಲ್ಲಿ ಕರೆಂಟ್ ಇವೆಂಟ್ಸ್, ಇತಿಹಾಸ, ಜಿಯಾಗ್ರಫಿ, ಭಾರತದ ರಾಜಕೀಯ ಮತ್ತು ಆಡಳಿತ, ಜನರಲ್ ಸ್ಟಡೀಸ್ ಇರುತ್ತೆ. ಪೇಪರ್2ರಲ್ಲಿ ಜನರಲ್ ಸ್ಟಡೀಸ್, ಮೆಂಟಲ್ ಅಬಿಲಿಟಿ ಟೆಸ್ಟ್ ಒಳಗೊಂಡಿರುತ್ತವೆ. ಇನ್ನು ಮೈನ್ ಪರೀಕ್ಷೆಯಲ್ಲಿ ಎರಡು ಐಚ್ಛಿಕ ವಿಷಯಗಳು (ತಲಾ 300 ಅಂಕ), ಜನರಲ್ ಸ್ಟಡೀಸ್ (2 ಪೇಪರ್- ತಲಾ 300 ಅಂಕ), ಪ್ರಬಂಧ (200 ಅಂಕ) ಇರುತ್ತೆ. ಇದಲ್ಲದೆ ಎರಡು ಭಾಷಾ ಪ್ರಶ್ನೆ ಪತ್ರಿಕೆ (ಒಂದು ಅಭ್ಯರ್ಥಿಯ ಮಾತೃಭಾಷೆ, ಇನ್ನೊಂದು ಇಂಗ್ಲಿಷ್) ಕೂಡ ಇರುತ್ತದಾದರೂ ಅದರ ಅಂಕ ರ್ಯಾಂಕಿಂಗ್ಗೆ ಗಣನೆಯಾಗದು. ಇನ್ನು ಸಂದರ್ಶನಕ್ಕೆ 300 ಅಂಕಗಳಿರುತ್ತವೆ. ಅಲ್ಲ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಯನ್ನು ಆತನ  ರಾಕಿಂಗ್ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನಿಯೋಜನೆ ಮಾಡಲಾಗುತ್ತದೆ. ಯಾವುದೇ ಹಂತದಲ್ಲಿ ಅಭ್ಯರ್ಥಿ ಅನುತ್ತೀರ್ಣಗೊಂಡರೂ ಮತ್ತೆ ಪ್ರಿಲಿಮಿನರಿಯಿಂದಲೇ ಶುರು ಮಾಡಬೇಕಾಗುತ್ತದೆ.

- ಈ ಪಠ್ಯಕ್ರಮ ಬದಲಾವಣೆಯಿಂದ ಅಭ್ಯರ್ಥಿಗಳಿಗೆ ಅನುಕೂಲವಾಗುತ್ತದೆಯೇ?
ಆಗಲೇಬೇಕು. ಐಎಎಸ್ ಮತ್ತು ಕೆಎಎಸ್ ಪಠ್ಯಗಳು ಮತ್ತು ಪರೀಕ್ಷಾ ವಿಧಾನ ಒಂದೇ ರೀತಿ ಇದ್ದರೆ ಎರಡು ಪರೀಕ್ಷೆಗಳನ್ನು ಒಟ್ಟೊಟ್ಟಿಗೇ ಎದುರಿಸಬಹುದು. ಇಲ್ಲವೇ ಒಂದರಲ್ಲಿನ ಅನುಭವ ಇನ್ನೊಂದಕ್ಕೆ ಪೂರಕವಾಗುತ್ತದೆ.

- ಆದರೆ ಹೆಚ್ಚಿನವರು ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಹೆದರುತ್ತಾರಲ್ಲ, ಯಾಕೆ?
ಮಾರ್ಗದರ್ಶನದ ಕೊರತೆಯೇ ಇದಕ್ಕೆ ಕಾರಣ. ಐಎಎಸ್, ಕೆಎಎಸ್ ಎಂಬೆಲ್ಲ ಹೆಸರುಗಳನ್ನು ಕೇಳಿದ ತಕ್ಷಣ ಅದು ಕಷ್ಟದ ಪರಿಕ್ಷೆ, ಪಾಸ್ ಮಾಡೋದಕ್ಕೆ ಸಿಕ್ಕಾಪಟ್ಟೆ ಬುದ್ಧಿವಂತರೇ ಆಗಬೇಕು ಎಂಬ ಕೀಳರಿಮೆ ನಮ್ಮಲ್ಲಿ ಬಂದುಬಿಡುತ್ತದೆ. ಮೊದಲಿಗೆ ನಮ್ಮ ಯುವ ಜನರ ಮನಸ್ಸಿನಿಂದ ಇಂಥ ಕೀಳರಿಮೆಯನ್ನು ಹೋಗಲಾಡಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಬೇಕಾದದ್ದು ಆತ್ಮವಿಶ್ವಾಸ. ಇಂಥ ಪರೀಕ್ಷೆಗಳನ್ನು ಬರೆಯಲು ಮುಂದೆ ಬರುವ ಅಭ್ಯರ್ಥಿಗಳಲ್ಲಿ ಮೊದಲು ಆತ್ಮ ವಿಶ್ವಾಸ ತುಂಬಿಸುವ ಕೆಲಸ ಮಾಡಬೇಕು.
ಯಾರು ಬೇಕಾದರೂ ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ತೇರ್ಗಡೆಯಾಗಬಹುದು ಎಂಬ ಭಾವನೆಯನ್ನು ಮೂಡಿಸುವಲ್ಲಿ ಸಫಲರಾದೆವು ಎಂದಾದರೆ ಇನ್ನೂ ಬಹಳಷ್ಟು ಅಭ್ಯರ್ಥಿಗಳು ಈ ಪರೀಕ್ಷೆಗಳನ್ನು ಎದುರಿಸುವುದಕ್ಕೆ ಸಾಧ್ಯವಿದೆ. ಇನ್ನು ನಮ್ಮಲ್ಲಿ- `ನಾವು ಸೈನ್ಸ್, ಮೆಡಿಕಲ್, ಎಂಜಿನಿಯರಿಂಗ್ ಓದಿದವರು, ಇಂಥ ಪರೀಕ್ಷೆಗಳು ನಮಗಿರುವುದಲ್ಲ' ಎಂಬ ಒಂದು ತಪ್ಪು ಕಲ್ಪನೆಯಿದೆ. ಜೊತೆಗೆ `ಐಎಎಸ್, ಕೆಎಎಸ್ ಮಾಡಿದವರು ಜಿಲ್ಲಾಧಿಕಾರಿಗಳಾಗುತ್ತಾರೆ. ಆ ಹುದ್ದೆ ಮಾತ್ರ ಸಿಗುವುದು. ಅದೂ ಕಷ್ಟವೇ' ಎಂಬ ಮನೋಭಾವವಿದೆ. ಈ ಎರಡೂ ತಪ್ಪು ಕಲ್ಪನೆಗಳನ್ನು ಬಿಟ್ಟು, ಈ ಕ್ಷೇತ್ರದಲ್ಲಿನ ವಾಸ್ತವವನ್ನು ನೋಡಬೇಕು. ಈಗ ನಮ್ಮ ಸ್ಟಡಿ ಸೆಂಟರ್ನಲ್ಲೇ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವ ಮೆಡಿಕಲ್, ಎಂಜಿನಿಯರಿಂಗ್ ಪದವೀಧರರು ಬಹಳಷ್ಟು ಮಂದಿ ಇದ್ದಾರೆ. ಇತ್ತೀಚೆಗೆ ನಡೆದಂಥ ಕೆಎಎಸ್ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶವೇ ಬಂದಿದೆ.ಐಎಎಸ್, ಕೆಎಎಸ್, ಪಿಎಸ್ಐ, ಇಎಸ್ಐ, ಪಿಡಿಒ, ಎಫ್ಡಿಎ... ಹೀಗೆ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿವಿಧ ರಂಗಗಳಲ್ಲಿ ಪದವಿ ಹೊಂದಿರುವವರು ಕೂಡಾ ಪಾಲ್ಗೊಳ್ಳುತ್ತಿದ್ದಾರೆ.  ಐಎಎಸ್, ಕೆಎಎಸ್ ಪಾಸ್ ಮಾಡಿದವರು ಜಿಲ್ಲಾಧಿಕಾರಿಗಳಾಗುವುದಕ್ಕೆ ಮಾತ್ರ ಸಾಧ್ಯವಾಗುವುದಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿನ ಹಲವಾರು ಹುದ್ದೆಗಳಿಗೆ ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರೇ ಬೇಕಾಗುತ್ತಾರೆ. ಹೀಗಾಗಿ ಈ ನಿಟ್ಟಿನಲ್ಲಿ ನಮ್ಮ ಯುವ ಜನಾಂಗವನ್ನು ಸಿದ್ಧಪಡಿಸುವುದು ಸೂಕ್ತ.

- ಒಟ್ಟಿನಲ್ಲಿ ಹೊಸ ಮಾದರಿಯ ಕೆಎಎಸ್ ಪರಿಕ್ಷೆಯನ್ನು ಎದುರಿಸಲು ಯಾವ ರೀತಿಯ ಸಿದ್ಧತೆ ನಡೆಸಬೇಕು?
ಮೊದಲು ಪರೀಕ್ಷೆಯ ಮಾದರಿಯನ್ನು ಸರಿಯಾಗಿ ಅಭ್ಯಾಸ ಮಾಡಿಕೊಳ್ಳಬೇಕು. ಹಾಗಾದರೆ ಮಾತ್ರ ಪಠ್ಯವನ್ನು ಅದಕ್ಕೆ ತಕ್ಕಂತೆ ಅಭ್ಯಾಸ ಮಾಡುವುದು ಸುಲಭವಾಗುತ್ತದೆ. ಜೊತೆಗೆ ಸಾಮಾನ್ಯ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಪತ್ರಿಕೆ ಓದುವ, ಟಿವಿ ವಾರ್ತೆ ವೀಕ್ಷಿಸುವ ಅಭ್ಯಾಸ ಇದ್ದರೆ ಪ್ರಸ್ತುತ ವಿದ್ಯಮಾನಗಳು (ಕರೆಂಟ್ ಅಫೇರ್ಸ್) ಗೊತ್ತಾಗುತ್ತವೆ. ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟ ಎಂಬ ಹೆದರಿಕೆಯೂ ಮಾಯವಾಗುತ್ತದೆ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮಲ್ಲಿ ಆಸಕ್ತಿ ಇರಬೇಕು. ಅಂಥ ಆಸಕ್ತಿಯುಳ್ಳ ವ್ಯಕ್ತಿಯಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಬೇಕೇ ಹೊರತು, ಈ ಪರೀಕ್ಷೆಗಳು ಕಷ್ಟ ಎಂದು ಆತನ/ಆಕೆಯ ಉತ್ಸಾಹಕ್ಕೆ ಭಂಗ ತರುವುದು ಸರಿಯಲ್ಲ. ನಮ್ಮಲ್ಲಿ ಆಗುತ್ತಿರುವುದು ಇದೇ. ಐಎಎಸ್ ಮತ್ತು ಕೆಎಎಸ್ ಪಠ್ಯ ಒಂದೇ ಮಾದರಿಯಾಗುತ್ತಿರುವ ಕಾರಣ ಈ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳಿಗೆ ಶ್ರಮ ಹೆಚ್ಚಬಹುದು ನಿಜ, ಆದರೆ ಸ್ಪರ್ಧಾತ್ಮಕ ಪರೀಕೆಗಳನ್ನು ಎದುರಿಸುವ ವಿಶ್ವಾಸ ಹೆಚ್ಚುವುದು ಖಂಡಿತ.

ಶಿವಶಂಕರ ದಡ್ದೆ ಅವರ ಸಂಪರ್ಕ ಸಂಖ್ಯೆ- 9686830614

Comments

  1. put this at buzz repeatedly. so that more people will have look @ it & get benefited.

    ReplyDelete

Post a Comment

Popular posts from this blog

ಜ್ಞಾನೋದಯ (?)

ಕಳೆದ ಬಾಲ್ಯವ ನೆನೆದು