ಉದ್ದೇಶವೊಂದೇ ಸಾಲದು, ಸಾಧನೆಯೂ ಜೊತೆಗೂಡಬೇಕು

ಸರಿಯಾಗಿ ಒಂದು ವರ್ಷವಾಗಿತ್ತು ಚೀನಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಕಡಿತಗೊಂಡು. ಈ ಸಂಬಂಧವನ್ನು ಮತ್ತೆ ಸುಧಾರಿಸಿಕೊಳ್ಳಬೇಕು, ಎರಡೂ ದೇಶಗಳ ನಡುವೆ ಮತ್ತೆ ಉತ್ತಮ ಸಂಬಂಧ ಬೆಸೆದುಕೊಳ್ಳಬೇಕು ಎಂಬ ಪ್ರಯತ್ನಗಳು ಸತತವಾಗಿ ನಡೆದಿದ್ದವು. ಇದು ಸಕಾರಕ್ಕೆ ಬರುವ ಪ್ರಯತ್ನ ನಡೆದದ್ದು ಭಾರತೀಯ ರಕ್ಷಣಾ ಇಲಾಖೆಯಿಂದ.

ಕೆಲವು ದಿನಗಳ ಹಿಂದೆ ಮೇಜರ್ ಜನರಲ್ ಗುರ್ ಮೀತ್ ಸಿಂಗ್ ನೇತೃತ್ವದ ರಕ್ಷಣಾ ಇಲಾಖೆಯ ಎಂಟು ಮಂದಿ ಸದಸ್ಯರನ್ನೊಳಗೊಂಡ ನಿಯೋಗವು ಚೀನಾಕ್ಕೆ ತೆರಳಿತ್ತು. ಮಿಲಿಟರಿ ಒಪ್ಪಂದಗಳನ್ನು ಮಾಡಿಕೊಳ್ಳುವುದು ಈ ಭೇಟಿಯ ಉದ್ದೇಶ. ಸತತ ಒಂದು ವಾರದ ಮಾತುಕತೆ. ಚೀನಾದ ವಿವಿಧ ನಗರಗಳಿಗೆ ಭೇಟಿ ಕೊಟ್ಟು ಅಲ್ಲಿನ ಅಭಿವೃದ್ಧಿ ಮತ್ತು ಮಿಲಿಟರಿ ವಿಚಾರಗಳನ್ನು ಅಧ್ಯಯನ ಮಾಡಿತು. ಚೀನಾದ ಮಿಲಿಟರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಅಷ್ಟೇ ಸಾಕೆ? ಫಲ ಬೇಡವೇ?

ಚೀನಾ ಭೇಟಿ ಫಲಪ್ರದವಾಗಿದೆ ಎಂದು ಚೀನಾದಿಂದ ವಾಪಸಾದ ಭಾರತೀಯ ನಿಯೋಗವೇನೋ ಹೇಳಿತ್ತು. ಆದರೆ ಸಂಪೂರ್ಣ ಮಾಹಿತಿಯನ್ನು, ಒಪ್ಪಂದದ ವಿವರಗಳನ್ನು ಕೊಟ್ಟಿರಲಿಲ್ಲ. ಜೂನ್ 29ರಂದು ಇದಕ್ಕೆ ತೆರೆ ಎಳೆಯುವಂತೆ ಚೀನಾ 'ಮಿಲಿಟರಿ ಒಪ್ಪಂದದ ಬಗ್ಗೆ ಮಾತುಕತೆಗಳು ನಡೆದದ್ದೇನೋ ನಿಜ. ಆದರೆ ಒಪ್ಪಂದ ಪೂರ್ಣಗೊಳ್ಳಲು ಎರಡೂ ಕಡೆಯಿಂದ ಹಲವಾರು ಅಡೆತಡೆಗಳಿವೆ. ಸಮಸ್ಯೆಗಳಿವೆ' ಎಂದಿತು. ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುವ ಮನಸ್ಥಿತಿಯನ್ನು ಪ್ರದರ್ಶಿಸಿದವು ನಿಜ. ಆದರೆ ಹೋದ ಕೆಲಸ ಕೈಗೂಡಲಿಲ್ಲ ಎಂದರೆ ಅದರ ಹಿಂದೆ ಏನಾದರೂ ಕಾರಣಗಳಿರಬೇಕಲ್ಲವೇ?
ಕಾಶ್ಮೀರವಾಸಿಗಳಿಗೆ ಸ್ಟ್ಯಾಪಲ್ಡ್ ವೀಸಾ ಒದಗಿಸುವ ವಿಚಾರದಿಂದಾಗಿ ಭಾರತ ಮತ್ತು ಚೀನಾ ನಡುವಿನ ಸಂಬಂಧ ಕದಡಿತ್ತು. ಅದನ್ನು ಸರಿಪಡಿಸಿಕೊಳ್ಳುವ ತುಡಿತ ಭಾರತದ್ದು. ಮೇಲ್ನೋಟಕ್ಕೆ ಚೀನಾದ್ದೂ ಇದೇ ಮನಸ್ಥಿತಿ ಎಂದೆನಿಸುತ್ತದೆ. ಅದು ಚೀನಾ ಬಹಳ ಹಿಂದಿನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ತಂತ್ರ. 'ತಾನು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದೇನೆ ಮತ್ತು ಹೊಂದುವುದಕ್ಕೆ ಕಾತರನಾಗಿದ್ದೇನೆ ಎಂದು ತೋರ್ಪಡಿಸಿಕೊಳ್ಳಬೇಕು. ಹಾಗಂತ ಎಲ್ಲ ವಿಚಾರಗಳಲ್ಲೂ ಬೇರೆ ದೇಶಗಳನ್ನು ನಂಬಿ ಕೂರಬಾರದು.' ಇದು ಚೀನಾದ ಸಿದ್ಧಾಂತ. ಖಂಡಿತಕ್ಕೂ ಇದು ಒಪ್ಪತಕ್ಕದ್ದೇ.

ಭಾರತ ಹಾಗಲ್ಲ, ನೆರೆ ರಾಷ್ಟ್ರಗಳೊಂದಿಗಿನ ಸಂಬಂಧ ಚೆನ್ನಾಗಿಲ್ಲ, ಕೀಳು ರಾಜಕೀಯದಿಂದಾಗಿ ಪ್ರಗತಿಯೂ ಆಮೆಗತಿಯನ್ನು ಹಿಡಿದಿದೆ. ಮಿಲಿಟರಿ ಕ್ಷೇತ್ರವನ್ನೂ ಇನ್ನು ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಪೂರ್ಣವಾಗಿ ಒಗ್ಗಿಕೊಂಡಿಲ್ಲ. ಬೇಕಾದಂಥ ಸೌಲಭ್ಯಗಳನ್ನೂ ನಮ್ಮ ಘನ ಸರ್ಕಾರಗಳು ಕೊಟ್ಟಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ದಾಪುಗಾಲಿಕ್ಕಿ ಬೆಳೆಯುತ್ತಿರುವಂಥ ದೇಶ ಚೀನಾ. ಅದು ಉತ್ಪಾದಿಸುವ ಉತ್ಪನ್ನಗಳಿಗೆ ಜಗತ್ತಿನಾದ್ಯಂತ ಮಾರುಕಟ್ಟೆ ಇದೆ. ತನ್ನನ್ನು ಅಭಿವೃದ್ಧಿಯ ವೇಗದಲ್ಲಿ ಕೊಂಡೊಯ್ಯುವ ಮನೋಶಕ್ತಿಯಿದೆ. ಹೊಸ ಹೊಸ ಸಾಧನೆಗಳಿಂದ ಜಗತ್ತಿನಾದ್ಯಂತ ಗಮನ ಸೆಳೆಯುತ್ತಿದೆ. ಜನಸಂಖ್ಯೆ ಏರುತ್ತಿದೆ ಎಂದಾಗ ಅದಕ್ಕೆ ನಿಯಂತ್ರಣ ಹಾಕುವಂಥ ಕಠೋರತೆಯಿದೆ. ಯುವಶಕ್ತಿ ಕ್ಷೀಣಿಸುತ್ತದೆ ಎಂದಾದಾಗ ನಿಯಮಗಳನ್ನು ಸಡಿಲಿಸುವುದಕ್ಕೂ ಗೊತ್ತಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿ ಎಂದರೆ ಇದುವೇ.

ಬಾಹ್ಯಾಕಾಶ, ವಿಜ್ಞಾನ, ಕ್ರೀಡೆ, ವಾಣಿಜ್ಯ, ಕೃಷಿ... ಹೀಗೆ ಯಾವ ಕ್ಷೇತ್ರವನ್ನೇ ಪರಿಗಣಿಸಿದರೂ ಅಲ್ಲಿ ಚೀನಾ ಅಭಿವೃದ್ಧಿಯ ದಾಪುಗಾಲಿಕ್ಕುತ್ತಿದೆ, ಅದು ಕೂಡಾ ದೂರದೃಷ್ಟಿಯುಳ್ಳ ಯೋಜನೆಗಳೊಂದಿಗೆ. ಸ್ವಾತಂತ್ರ್ಯ ಬಂದ ಸಮಯದಲ್ಲಿ ಚೀನಾಕ್ಕಿಂತ ಮುಂದಿದ್ದ ಭಾರತ ಈಗ ಅದಕ್ಕಿಂತ ಬಹಳಷ್ಟು ಹಿಂದೆ ಉಳಿದುಕೊಂಡುಬಿಟ್ಟಿದೆ. ಹೀಗಿರುವಾಗ ಯಾರ ಅಗತ್ಯ ಯಾರಿಗೆ ಬರುತ್ತದೆ ಎಂಬುದನ್ನು ಯೋಚಿಸಿ. ಚೀನಾ ಭಾರತದಿಂದ ಪಡೆಯುವಂಥದ್ದು ಏನೂ ಇಲ್ಲ. ಎಂತಹ ಪರಿಸ್ಥಿತಿಯನ್ನೇ ಆದರೂ ಏಕಾಂಗಿಯಾಗಿ ಎದುರಿಸಬಲ್ಲ ಛಾತಿಯನ್ನು, ಮನಸ್ಥಿತಿಯನ್ನು ಅದು ಬೆಳೆಸಿಕೊಂಡು ಎಷ್ಟೋ ವರ್ಷಗಳಾದವು. ಹಾಗಿರುವಾಗ ಭಾರತದ ಮುಂದೆ ಕೈಚಾಚಬೇಕಾದ, ಉತ್ತಮ ಸಂಬಂಧ ಇಟ್ಟುಕೊಳ್ಳಿ ಎಂದು ಗೋಗರೆಯಬೇಕಾದ ಪರಿಸ್ಥಿತಿ ಅದಕ್ಕಿಲ್ಲ. ಪ್ರಸ್ತುತ ಏನಾದರೂ ಸಹಾಯ ಬಯಸುವುದಿದ್ದರೆ ಅದು ಭಾರತ ಚೀನಾದಿಂದಲೇ. ಭಾರತವೋ ತನ್ನದೇ ರಾಜಕೀಯ ಗದ್ದಲದಲ್ಲಿ ಮುಳುಗಿ ಭ್ರಷ್ಟಾಚಾರವೇ ಸರ್ವಸ್ವ ಎಂದುಕೊಂಡು ಅಭಿವೃದ್ಧಿಯನ್ನು ಕಡೆಗಣಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ದುರ್ಬಲವಾಗಿದೆ. ಚೀನಾ ಹೊಂದಿರುವ ರಫ್ತು ಪ್ರಮಾಣದ ಅರ್ಧದಷ್ಟು ರಫ್ತು ಪ್ರಮಾಣವನ್ನು ಕೂಡಾ ಭಾರತ ಹೊಂದಿಲ್ಲ ಎಂದರೆ ನಮ್ಮ ವಿದೇಶ ವ್ಯವಹಾರ ನೀತಿಗಳ ಬಗ್ಗೆ ಯೋಚಿಸಬೇಕಾಗುತ್ತದೆ.

ಇಷ್ಟಕ್ಕೇ ಭಾರತೀಯ ಮಿಲಿಟರಿ ನಿಯೋಗ ಮಹತ್ವದ ಯಾವ ಒಪ್ಪಂದಗಳೂ ಇಲ್ಲದೇ ಚೀನಾದಿಂದ ವಾಪಸಾಗುವಂಥ ಪರಿಸ್ಥಿತಿ ಯಾಕೆ ಬಂತು ಎಂಬುದು ಅರ್ಥವಾಗುತ್ತದೆ. ಭಾರತೀಯ ನಿಯೋಗ ಹೋಗಿ ಮಿಲಿಟರಿ ಒಪ್ಪಂದ ಮಾಡಿಕೊಳ್ಳೋಣ ಎಂದ ತಕ್ಷಣ ಒಪ್ಪಿಕೊಂಡುಬಿಡುವಂಥ ದರ್ದು ಚೀನಾಕ್ಕಿಲ್ಲ. ಭಾರತ ಒತ್ತಡ ಹೇರಿದರೂ ಅದು ಒಪ್ಪಿಕೊಳ್ಳುತ್ತದೆ ಎಂಬ ಗ್ಯಾರಂಟಿಯಿಲ್ಲ. ಯಾವುದಾದರೂ ದೇಶ ಒತ್ತಡ ಹೇರಿದ ತಕ್ಷಣ ಅದಕ್ಕೆ ಒಪ್ಪಿಕೊಳ್ಳುವುದು, ತಗ್ಗುವುದು ಭಾರತೀಯ ಸರ್ಕಾರಗಳು ಅನುಸರಿಸಿಕೊಂಡು ಬಂದಿರುವ 'ಸಂಪ್ರದಾಯ'!

ಚೀನಾದ ಅಭಿವೃದ್ಧಿಯ ವೇಗ, ಅದರ ದೂರದೃಷ್ಟಿ ಹೇಗಿದೆ ಎಂಬುದಕ್ಕೆ ಹಲವು ಸಾಕ್ಷ್ಯಗಳಿವೆ. ಅಲ್ಲಿನ ಮಿಲಿಟರಿ ವ್ಯವಸ್ಥೆ, ಅವರು ಹೊಂದಿರುವ ಶಸ್ತ್ರಾಸ್ತ್ರಗಳು ಎಲ್ಲವೂ ಭಾರತಕ್ಕಿಂತ ಅತ್ಯಾಧುನಿಕವಾದವು. ಪಾಕಿಸ್ತಾನದ ಜೊತೆಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿರುವ ಚೀನಾ ಪ್ರಸ್ತುತ ತನ್ನ ಮಿಲಿಟರಿಯ ಹಲವು ತುಕಡಿಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕುಳ್ಳಿರಿಸಿದೆ. ಒಂದು ವೇಳೆ ಭಾರತದೊಂದಿಗೆ ಯುದ್ಧ ಮಾಡಬೇಕಾದಂಥ ಪ್ರಸಂಗ ಬಂದೊದಗಿದರೆ? ಎಂಬ ಯೋಚನೆಯಲ್ಲಿ. ಅಷ್ಟಕ್ಕೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಸೇನೆ ಬಂದು ಕುಳಿತಿರುವ ವಿಚಾರ ಬೆಳಕಿಗೆ ಬಂದ ಬಳಿಕವೇ ಭಾರತ ಮಿಲಿಟರಿ ನಿಯೋಗ ಚೀನಾಕ್ಕೆ ತೆರಳಿದ್ದು! ಇನ್ನು ಉತ್ತರದಲ್ಲಿ ಟಿಬೆಟ್ ದಾಟಿ ಅರುಣಾಚಲ ಪ್ರದೇಶದ ತೀರಾ ಸಮೀಪಕ್ಕೆ ಬಂದಿದೆ. ಹಲವು ಕಡೆ ಭಾರತದ ಭೂಮಿಯನ್ನು ಅದು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ. ಭಾರತ ಮಾತ್ರ ಇವೆಲ್ಲವನ್ನೂ ನೋಡುತ್ತಾ ಅತ್ತ ಕುಡಿನೋಟವನ್ನೂ ಬೀರದೆ ಕೇವಲ ತನ್ನ ರಾಜಕೀಯ ಕಲಹದಲ್ಲಿ ದಿನಗಳೆಯುತ್ತಿದೆ.

ಕಡಿದಾದ ಬಹುದೊಡ್ಡ ಬಂಡೆಕಲ್ಲಿನ ಮೇಲೆಯೇ ಮಾರ್ಗ ನಿರ್ಮಿಸುವ ಸಾಹಸವನ್ನು ಚೀನಾ ಕೈಗೊಂಡಿದೆ. ಅದನ್ನು ಸಾಧಿಸಿಯೂ ತೋರಿಸುತ್ತದೆ. ಜಗತ್ತಿನ ನಾಲ್ಕನೇ ಅತಿದೊಡ್ಡ ಕಟ್ಟಡವನ್ನು ಅದು ಈಗ ನಿರ್ಮಿಸುತ್ತಿದೆ. 2016ರ ವೇಳೆಗೆ ಅದರ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ. ರಾಕೆಟ್ ನ ಆಕೃತಿಯಲ್ಲಿ ಈ ಕಟ್ಟಡವಿದ್ದು, ಗಾಳಿಯ ಹೊಡೆತವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇತ್ತೀಚೆಗಷ್ಟೇ ಇನ್ನೊಂದು ಅದ್ಭುತವನ್ನು ಚೀನಾ ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಅದು ಜಗತ್ತಿನ ಅತಿ ಉದ್ದದ ಸಮುದ್ರ ಸೇತುವೆ. ಬರೋಬ್ಬರಿ 26.4 ಮೈಲಿ (ಸುಮಾರು 43 ಕಿ.ಮೀ) ಉದ್ದದ ಈ ಸೇತುವೆ ಚೀನಾದ ಪೂರ್ವ ಬಂದರು ನಗರ ಕ್ವಿಂಗ್್ಡೋ ಮತ್ತು ಹ್ವಾಂಗ್್ಡೋ ದ್ವೀಪವನ್ನು ಬೆಸೆಯುತ್ತದೆ. ಇಷ್ಟು ಉದ್ದದ ಸೇತುವೆಯನ್ನು ಸಮುದ್ರದಲ್ಲಿ ನಿರ್ಮಿಸಿದ್ದಕ್ಕಿಂತ ದೊಡ್ಡ ಸಾಧನೆ ಇನ್ನೇನಾದರೂ ಬೇಕೆ? ಪಟ್ಟಿ ಮಾಡುತ್ತಾ ಹೋದರೆ ಹಲವು ಅಚ್ಚರಿಗಳು ಚೀನಾದಲ್ಲಿ ತೆರೆದುಕೊಳ್ಳುತ್ತವೆ.

ಭಾರತದಲ್ಲಿ ಜಗತ್ತೇ ನಿಬ್ಬೆರಗಾಗುವಂಥ ಯಾವುದಾರೂ ಒಂದು ಮಹತ್ವದ ಸಾಧನೆಯನ್ನು (ಭ್ರಷ್ಟಾಚಾರವನ್ನು ಹೊರತುಪಡಿಸಿ) ತೋರಿಸಿ ನೋಡೋಣ.
ಪ್ರತಿಯೊಂದು ಕ್ಷೇತ್ರದಲ್ಲಿಯೂ ಚೀನಾ ಮುಂಚೂಣಿಯನ್ನು ಸಾಧಿಸಿರುವಾಗ ಅದು ಭಾರತದ ಸಣ್ಣ ಪುಟ್ಟ ಮನವಿಗೆಲ್ಲ ಸ್ಪಂದಿಸುತ್ತದೆ ಎಂದು ಭಾವಿಸುವುದು ತಪ್ಪು. ಹಾಗಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡುತ್ತದೆ. ಚೀನಾ ಸಾಧಿಸಿದ್ದಕ್ಕಿಂತ ವೇಗದ ಪ್ರಗತಿಯನ್ನು ಭಾರತ ಸಾಧಿಸಬೇಕು. ದೇಶವನ್ನೇ ದೋಚಿ ಸ್ವಿಸ್ ಬ್ಯಾಂಕುಗಳಲ್ಲಿ ಅಡಗಿಸಿಟ್ಟಿರುವ ಕಪ್ಪುಹಣವನ್ನು, ದೇಶೋದ್ಧಾರಕ್ಕೆಂದು ಮೀಸಲಿಟ್ಟ ಹಣವನ್ನು ದೋಚಿ ತಮ್ಮ ಕುಟುಂಬವನ್ನು ಶ್ರೀಮಂತಗೊಳಿಸಲು ರಾಜಕಾರಣಿಗಳು ಬಳಸಿಕೊಂಡ ದುಡ್ಡನ್ನು ಮತ್ತೆ, ನಿಷ್ಠೆಯಿಂದ, ಪ್ರಾಮಾಣಿಕವಾಗಿ ಭಾರತದ ಅಭಿವೃದ್ಧಿಗೆಂದೇ ವಿನಿಯೋಗಿಸಿದಲ್ಲಿ ಇದು ಸಾಧ್ಯ. ದೊಡ್ಡ ಮೊತ್ತದ ಯೋಜನೆಗಳನ್ನು ರೂಪಿಸಿ ಯಾವುದನ್ನೂ ಕಾರ್ಯಗತಗೊಳಿಸದೆ ಕುಳಿತರೆ ಅಭಿವೃದ್ಧಿ ಎಂಬುದನ್ನು ಕನಸಿನಲ್ಲಿಯೂ ಸಾಧಿಸುವುದಕ್ಕೆ ಸಾಧ್ಯವಿಲ್ಲ.

ಇನ್ನು ಚೀನಾದ ವಿಚಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗೆ ಇರುವುದಕ್ಕಿಂತ ಹೆಚ್ಚು ಜಾಗರೂಕವಾಗಿರಬೇಕಾಗುತ್ತದೆ. ಸದಾ ಎರಡು ಮುಖಗಳನ್ನು ಪ್ರದರ್ಶಿಸುತ್ತಾ ಅವಕಾಶ ಸಿಕ್ಕಾಗಲೆಲ್ಲ ತನ್ನ ನೈಜ ಬುದ್ಧಿಯನ್ನು ಪ್ರದರ್ಶಿಸಿ ನಂತರ ತಾನೇನೂ ಮಾಡೇ ಇಲ್ಲ ಎಂಬಂತೆ ಸೋಗು ಹಾಕುವುದರಲ್ಲಿ ಅದರಷ್ಟು ಪರಿಣತ ದೇಶ ಮತ್ತೊಂದಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಚೀನಾದೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕೆಂದು ಭಾರತ ಬಯಸಿದ್ದರಲ್ಲಿ ಖಂಡಿತಕ್ಕೂ ತಪ್ಪಿಲ್ಲ. ನಮ್ಮ ಮನೆಯ ಪಕ್ಕದವರೊಂದಿಗೆ ಸೌಹಾರ್ದದಿಂದ, ಉತ್ತಮ ಸಂಬಂಧ ಹೊಂದಿರಬೇಕಾದದ್ದು ಮಾನವಧರ್ಮ. ದೇಶವನ್ನು ಪರಿಗಣಿಸಿದರೂ ಇದೇ ಮಾತು ಅನ್ವಯವಾಗುತ್ತದೆ. ಹಾಗಂತ, ನೆರೆಯವರು ಕಾಲ್ಕೆದರಿ ಜಗಳಕ್ಕೆ ನಿಂತಾಗ ಅವರಿಗೆ ತಕ್ಕ ಉತ್ತರವನ್ನು ಕೊಡುವಷ್ಟು ಶಕ್ತಿ ನಮ್ಮಲ್ಲಿರಬೇಕಾಗುತ್ತದೆ. ಅಥವಾ ನೆರೆಯವರು ನಮ್ಮೊಂದಿಗೆ ಜಗಳಕ್ಕೆ ನಿಲ್ಲಲು ಅವಕಾಶವೇ ಸಿಗದಷ್ಟು ಎತ್ತರಕ್ಕೆ ನಾವು ಬೆಳೆಯಬೇಕು, ಚೀನಾ ಬೆಳೆದಿರುವಂತೆ.

Comments

Popular posts from this blog

ಜ್ಞಾನೋದಯ (?)

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಕಳೆದ ಬಾಲ್ಯವ ನೆನೆದು