ಜನಪ್ರಿಯತೆಯ ಅಲೆಯಲ್ಲಿ ಕೊಚ್ಚಿ ಹೋಗುತ್ತಿದೆ ವೃತ್ತಿಪರತೆ!


'ಪ್ರತಿಯೊಂದು ಪಂದ್ಯವನ್ನೂ ಆಡ್ಬೇಕು, ಪ್ರತಿಯೊಂದನ್ನೂ ಗೆಲ್ಲಬೇಕು'! ಕ್ರಿಕೆಟ್ ಬಗ್ಗೆ ಭಾರತೀಯ ಪ್ರೇಕ್ಷಕನ ನಿರೀಕ್ಷೆಯಿದು. ಹಲವು ದಶಕಗಳಿಂದ ಭಾರತೀಯ ಜೀವನದ ಅವಿಭಾಜ್ಯ ಅಂಗವೋ ಎಂಬಷ್ಟು ಮಾನ್ಯತೆ ಪಡೆದಿರುವಂಥ ಕ್ರಿಕೆಟ್ ನಿಂದ ಈ ಮಟ್ಟದ ನಿರೀಕ್ಷೆ ಮಾಡಿದಲ್ಲಿ ತಪ್ಪೇನು ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಬಹುದು. ಭಾರತೀಯ ಕ್ರಿಕೆಟ್ ತಂಡ ಹೆಚ್ಚು ಸಮರ್ಥ ಫಲತಾಂಶ ನೀಡಲು ಯಶಸ್ವಿಯಾಗದೇ ಇರುವುದಕ್ಕೆ ವೇಳಾಪಟ್ಟಿಯೇ ಕಾರಣ ಎಂಬುದು ಖಂಡಿತ.


ಇತ್ತೀಚೆಗಿನ ಇಂಗ್ಲೆಂಡ್ ಪ್ರವಾಸದ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಒಂದು ಟೆಸ್ಟ್, ಏಕದಿನ ಮತ್ತು ಟಿ20 ಸರಣಿ ಗಳನ್ನು ಆಡಿತು. ಅದಾದ ಕೆಲವೇ ದಿನಗಳಲ್ಲಿ ಶುರುವಾಯಿತು ಛಾಂಪಿಯನ್ಸ್ ಲೀಗ್. ಈ ಲೀಗ್ ಮುಗಿಯುವುದೇ ತಡ ಮತ್ತೆ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿ!

ಈ ಸರಣಿಗಳ ನಡುವೆ ಬಿಡುವೆಲ್ಲಿದೆ ಸ್ವಾಮಿ? ಬಿಡುವಿಲ್ಲದ ದಿನಚರಿಯ ಹಿನ್ನೆಲೆಯಲ್ಲಿ ಜನರು ಟಿ20 ಪಂದ್ಯಗಳನ್ನು ಇಷ್ಟಪಡುತ್ತಾರೆ ನಿಜ. ಇಂದು ಟಿ20 ಪಂದ್ಯಗಳೇ ಹೆಚ್ಚಾಗಿವೆ ಎಂದರೆ ಅದಕ್ಕೆ ಮುಖ್ಯವಾದ ಕಾರಣ ಅದರಿಂದ ಬರುವ ಹಣ! ಟಿ20 ಪಂದ್ಯಗಳ ಆಯೋಜನೆಯಿಂದ ಎಷ್ಟು ಹಣ ಬರಬಹುದು ಎಂಬ ಆಲೋಚನೆ ಬಿಸಿಸಿಐ ಮನಸ್ಸಿನಲ್ಲಿದ್ದರೆ, ಇವುಗಳಿಂದ ತಾವೆಷ್ಟು ಹಣ ಸಂಪಾದನೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ ಆಟಗಾರರು. ಟಿ20 ಪಂದ್ಯಗಳಿಂದ ಹಣ ಬರುತ್ತೆ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮಿಂಚಿದರೆ ಹೆಸರು ಬರುತ್ತೆ. ಎರಡು ಚಿನ್ನದ ತಟ್ಟೆಗಳನ್ನು ಮುಂದಿಟ್ಟರೆ, ಎರಡನ್ನೂ ತೆಗೆದುಕೊಳ್ಳುವ ಬಯಕೆ ಹುಟ್ಟಿಕೊಳ್ಳುತ್ತದಲ್ಲವೇ? ಅಂತಾಗಿದೆ ಕ್ರಿಕೆಟಿಗರ ಮನಃಸ್ಥಿತಿ.

ಗೆಲ್ಲುವುದಕ್ಕೆ ಕಲೆ ಬೇಕು
ಟಿ20 ಪಂದ್ಯಗಳಲ್ಲಿ 20 ಓವರ್ ನಲ್ಲಿ 200 ರನ್ ಮಾಡುವುದಕ್ಕೂ ನಮ್ಮ ಆಟಗಾರರು ಸಮರ್ಥರಾಗಿದ್ದಾರೆ. ಏಕದಿನಕ್ಕೆ ಬಂದರೆ 50 ಓವರ್ ಗಳಲ್ಲಿ 300 ರನ್ ಒಟ್ಟುಗೂಡಿಸುವುದಕ್ಕೆ ತಿಣುಕಾಡುತ್ತಾರೆ. ಇನ್ನು ಟೆಸ್ಟ್ ಪಂದ್ಯಗಳಲ್ಲಿ ಸತತ ಐದು ದಿನಗಳು ಆಡುವ ಮಾತು ಹಾಗಿರಲಿ, 200 ರನ್ ಮಾಡುವುದೂ ಕಷ್ಟವೇ! ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗಿನ ಭಾರತದ ತಂಡದ ಇಂಗ್ಲೆಂಡ್ ಪ್ರವಾಸ.

ಒಂದು ತಂಡ ಸ್ವದೇಶದಲ್ಲಿ ಗೆಲ್ಲುವುದು ಸುಲಭ. ಕಾರಣ- ಪಿಚ್ ನ ಪರಿಚಯ ಇರುತ್ತೆ. ಇದಕ್ಕಿಂತಲೂ ಮುಖ್ಯವಾಗಿ ಸ್ವದೇಶದ ಹವಾಗುಣಕ್ಕೆ ದೇಹ ಹೊಂದಿಕೊಂಡಿರುತ್ತದೆ. ವಿದೇಶಕ್ಕೆ ಪ್ರವಾಸ ಹೋದಾಗ ಮೊದಲನೆಯ ಸಮಸ್ಯೆ ಎದುರಾಗುವುದು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ. ಮೊದಲಾದರೆ ಒಂದು ಕ್ರಿಕೆಟ್ ತಂಡದ ವಿದೇಶ ಪ್ರವಾಸ ಎಂದರೆ- ಆಯಾ ದೇಶಕ್ಕೆ ಹೋಗಿ ಅಲ್ಲಿ ಹಲವಾರು ಅಭ್ಯಾಸ ಪಂದ್ಯಗಳನ್ನು ಆಡಿದ ನಂತರ ಸರಣಿ ಶುರುವಾಗುತ್ತಿತ್ತು. ಈಗ ಹಾಗಿಲ್ಲ; ಸರಣಿಗಳ ಸಾಲಿನಲ್ಲಿ ಅಭ್ಯಾಸ ಪಂದ್ಯಗಳಿಗೆ ಬಿಡುವಿಲ್ಲ.

ಪ್ರತಿಯೊಂದು ದೇಶದ ಪಿಚ್ ಕೂಡಾ ವಾತಾವರಣದಂತೆಯೇ ಭಿನ್ನವಾಗಿರುತ್ತದೆ. ಇನ್ನು ಭಾರತಕ್ಕೆ ಬಂದರೆ ಇಲ್ಲಿನ ಪ್ರತಿಯೊಂದು ಪಿಚ್ ಸಹ ಒಂದಕ್ಕಿಂತ ಇನ್ನೊಂದು ಭಿನ್ನ. ಯಾವುದೇ ಪಿಚ್ ನಲ್ಲಿ ಆಡಬೇಕಾದರೆ ಮೊದಲು ಚೆಂಡು ಹೇಗೆ ಟರ್ನ್ ತೆಗೆದುಕೊಳ್ಳುತ್ತದೆ, ಹೇಗೆ ಸ್ವಿಂಗ್ ಆಗುತ್ತದೆ, ಯಾವುದಾದರೂ ಹಂತದಲ್ಲಿ ಪಿಚ್ ನಲ್ಲಿ ಬದಲಾವಣೆಯಾಗುತ್ತದೆಯೇ ಎಂಬೆಲ್ಲ ವಿಚಾರಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಈ ಅಭ್ಯಾಸ ಬ್ಯಾಟ್ಸ್ ಮನ್ ಗೂ ಬೇಕು, ಬೌಲರ್ ಗಳಿಗೂ ಬೇಕು. ಭಾರತ ತಂಡ ಇಂಗ್ಲೆಂಡ್ ಗೆ ಪ್ರವಾಸ ಹೋದಾಗ ಆಡಿದ್ದು ಒಂದೇ ಒಂದು ಅಭ್ಯಾಸ ಪಂದ್ಯ. ಪ್ರಸ್ತುತ ಭಾರತದಲ್ಲಿರುವ ಇಂಗ್ಲೆಂಡ್ ತಂಡ ಕೂಡಾ ಆಡಿದ್ದು ಒಂದೇ ಅಭ್ಯಾಸ ಪಂದ್ಯ. ಎರಡೂ ತಂಡಗಳು ಆಯಾ ದೇಶದ ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ವಿಫಲವಾಗಿದ್ದು ಎರಡೂ ಸರಣಿಯಲ್ಲಿ ಗೊತ್ತಾಗುತ್ತದೆ.

ಹವಾಮಾನಕ್ಕೆ, ಪಿಚ್ ನ ಟರ್ನ್ ಗಳಿಗೆ ಯಾವ ಆಟಗಾರ ತನ್ನನ್ನು ಹೊಂದಿಸಿಕೊಳ್ಳುತ್ತಾನೆಯೋ ಅವನು ಯಶಸ್ವಿಯಾಗುತ್ತಾನೆ. ರಾಹುಲ್ ದ್ರಾವಿಡ್ ಯಾವುದೇ ದೇಶದ ಪಿಚ್ ನಲ್ಲಿಯೂ ಸಮರ್ಥವಾಗಿ ಆಡಬಲ್ಲರು ಎಂದರೆ ಅದಕ್ಕೆ ಕಾರಣ ಪ್ರತಿಯೊಂದು ಪಿಚ್ ನ ಬಗ್ಗೆಯೂ ಅವರಿಗಿರುವಂಥ ಅನುಭವ. ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಸೌರವ್ ಗಂಗೂಲಿ ಅವರಂಥ ಆಟಗಾರರು ಹಲವು ವರ್ಷಗಳ ಕಾಲ ಕ್ರಿಕೆಟ್ ತಂಡದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರಲ್ಲಿನ ಈ ಗುಣ ಮತ್ತು ಕಲಾತ್ಮಕತೆ.

ವೃತ್ತಿಪರತೆ ಕಳೆದು ಹೋಗಿದೆ
ಟಿ20 ಪಂದ್ಯಗಳಲ್ಲಿ ಆಡುವ ಆಟಗಾರರಿಗೆ ಏಕದಿನ, ಟೆಸ್ಟ್ ಪಂದ್ಯಗಳಲ್ಲಿ ಆಡಲಾಗುತ್ತಿಲ್ಲ ಎಂದರೆ ಅದಕ್ಕೆ ಕಾರಣ ಅವರಲ್ಲಿರುವ ವೃತ್ತಿಪರತೆಯ ಕೊರತೆ. ಪ್ರತಿಯೊಂದು ಪ್ರಕಾರದ ಕ್ರಿಕೆಟ್ ಕೂಡಾ ಅದರದ್ದೇ ಆದಂಥ ಕಲಾತ್ಮಕತೆಯನ್ನು ಹೊಂದಿದೆ. ಟಿ20 ಆಡಿದಂತೆ ಏಕದಿನವನ್ನು ಆಡಲಾಗುವುದಿಲ್ಲ; ದೀರ್ಘಕಾಲ ನೆಲಕಚ್ಚಿ ನಿಂತುಕೊಳ್ಳುವ ಸಾಮರ್ಥ್ಯ ಇಲ್ಲದಿದ್ದರೆ ಟೆಸ್ಟ್ ಆಡುವುದಕ್ಕಾಗುವುದಿಲ್ಲ. ಯುವಕ್ರಿಕೆಟಿಗರಲ್ಲಿ ಶೇ.90ಕ್ಕಿಂತಲೂ ಅಧಿಕ ಆಟಗಾರರಿಗೆ ನೆಲಕಚ್ಚಿ ಆಡುವುದಕ್ಕೆ ಗೊತ್ತೇ ಇಲ್ಲ. ಅವರು ಅದರ ಅನುಭವವನ್ನೂ ಪಡೆದಿಲ್ಲ; ಅದಕ್ಕೆ ಅವಕಾಶವೂ ಸಿಕ್ಕಿಲ್ಲ. ಯಾಕೆಂದರೆ ಟಿ20ಯ ಭರಾಟೆಯಲ್ಲಿ ಟೆಸ್ಟ್ ಪಂದ್ಯಾವಳಿಗಳೇ ಕಡಿಮೆ.

ಇದಕ್ಕೆ ನಿಜವಾಗಿ ಆಟಗಾರರು ಕಾರಣರಲ್ಲ. ಬಿಸಿಸಿಐಯನ್ನು ಇದಕ್ಕೆ ನೇರವಾಗಿ ಹೊಣೆಯಾಗಿಸಬಹುದು. ಕ್ರಿಕೆಟ್ ಜಗತ್ತಿನ ಅತ್ಯಂತ ಶ್ರೀಮಂತ ಸಂಸ್ಥೆ ಬಿಸಿಸಿಐ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯಲ್ಲಿ ಬಿಸಿಸಿಐ ವಿರುದ್ಧ ಧ್ವನಿಯೆತ್ತುವ ಸಾಮರ್ಥ್ಯ ಯಾವ ಕ್ರಿಕೆಟ್ ಸಂಸ್ಥೆಗೂ ಇಲ್ಲ; ಸ್ವತಃ ಐಸಿಸಿಗೂ! ಟಿ20ಯಿಂದ ವ್ಯಾಪಕ ಹಣ ಹರಿದು ಬರುತ್ತದೆ; ಬಿಸಿಸಿಐಯ ಶ್ರೀಮಂತಿಕೆ ಐಸಿಸಿಗೂ ಅಗತ್ಯವಿದೆ. ಇಂತಿರುವಾಗ ಸೊಲ್ಲೆತ್ತುವವರು ಯಾರು?

ಹೀಗಾಗಿಯೇ ಕ್ರಿಕೆಟಿಗರನ್ನು ಹೆಚ್ಚೆಚ್ಚು ಟಿ20 ಕ್ರಿಕೆಟ್ ಆಡುವಂತೆ ಒತ್ತಡ ಹೇರುತ್ತಿದೆ ಬಿಸಿಸಿಐ. ಹಿಂದೆಲ್ಲ ಆಟಗಾರರು ಸ್ವತಃ ವಿಶ್ರಾಂತಿ ಬೇಕೆಂದು ಹೇಳುತ್ತಿದ್ದರು. ಆದರೆ ಇಂದು ಯಾವ ಆಟಗಾರರೂ ಸಹ ವಿಶ್ರಾಂತಿ ಬೇಕೆಂದು ಸ್ವಇಚ್ಛೆಯಿಂದ ಹೇಳುತ್ತಿಲ್ಲ. ಯಾಕೆಂದರೆ ಎಷ್ಟು ಆಟ ಆಡುವುದಕ್ಕೆ ಅವಕಾಶ ಸಿಗಬಹುದು ಎಂಬ ಕಲ್ಪನೆ ಅವರಲ್ಲಿಲ್ಲ. ದೀರ್ಘ ಅನುಭವ ಇಲ್ಲದ ಹೊರತಾಗಿ ವೃತ್ತಿಪರತೆ ಬೆಳೆಯುವುದಕ್ಕೆ ಸಾಧ್ಯವೂ ಇಲ್ಲ. ಮೂರ್ನಾಲ್ಕು ಪಂದ್ಯಗಳಲ್ಲಿ ಒಬ್ಬ ಆಟಗಾರನ ಸಾಮರ್ಥ್ಯವನ್ನು ಅಳೆಯುವುದಕ್ಕೆ ಸಾಧ್ಯವೂ ಇಲ್ಲ.
ಕನಿಷ್ಠ ಬೇರೆ ಬೇರೆ ಸರಣಿಗೆ ಬೇರೆ ಬೇರೆ ಆಟಗಾರರಿಗೆ ಅವಕಾಶ ಕೊಟ್ಟರಾದರೂ ಪ್ರತಿಯೊಬ್ಬರಿಗೂ ಸ್ವಲ್ಪ ವಿಶ್ರಾಂತಿ ಸಿಕ್ಕೀತು. ಆದರೆ ಇತ್ತೀಚೆಗಿನ ಸರಣಿಯನ್ನೇ ಗಮನಿಸಿದರೆ ಶೇಕಡಾ 75ಕ್ಕಿಂತಲೂ ಅಧಿಕ ಆಟಗಾರರು ಪ್ರತಿಯೊಂದು ಸರಣಿಯಲ್ಲಿಯೂ ಕಾಣಿಸಿಕೊಳ್ಳುತ್ತಾರೆ.

ಇವರಿಗೆ ಸರಣಿಯ ಪಂದ್ಯಗಳೇ ಅಭ್ಯಾಸ ಪಂದ್ಯಗಳಂತಾಗಿರುವಾಗ, ಆಡುವ ಒಂದೇ ಪಂದ್ಯದಲ್ಲಿಯೇ ತಮ್ಮೆಲ್ಲ ಸಾಮರ್ಥ್ಯವನ್ನು ಪ್ರದರ್ಶಿಸಲೇಬೇಕಾದ ಒತ್ತಡವನ್ನು ಹೊಂದಿರುವಾಗ, ಓದದೇ ಪರೀಕ್ಷೆ ಪಾಸಾಗಬೇಕು ಎಂಬಂಥ ಸ್ಥಿತಿಯಿರುವಾಗ ಎಲ್ಲ ಪಂದ್ಯಗಳಲ್ಲೂ ಗೆಲುವನ್ನು ಹೇಗೆ ತಾನೇ ನಿರೀಕ್ಷಿಸುವುದಕ್ಕೆ ಸಾಧ್ಯ? ಆಟಗಾರರೂ ಸ್ವಲ್ಪ ಉಸಿರಾಡುವುದಕ್ಕೆ ಅವಕಾಶ ಸಿಗಲಿ, ಒಂದಷ್ಟು ಅಭ್ಯಾಸ ಮಾಡುವಂಥ ಮನಸ್ಸು ಆಟಗಾರರಿಗೆ ಬರಲಿ. ಆದರೆ ಜನಪ್ರಿಯತೆಯ ಅಲೆಯಲ್ಲಿ ವೃತ್ತಿಪರತೆ ಎಂಬುದು ನಶಿಸಿ ಹೋಗುತ್ತಿರುವಾಗ ಇದು ಸಾಕಾರಗೊಂಡೀತೆ?

Comments

Popular posts from this blog

ಜ್ಞಾನೋದಯ (?)

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಕಳೆದ ಬಾಲ್ಯವ ನೆನೆದು