ವಿತ್ತ ಕೊರತೆಯಿದ್ದರೆ ವೆಚ್ಚಕ್ಕೆ ಕಡಿವಾಣ ಹಾಕಿ!

ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ.5.6ರಷ್ಟು ವಿತ್ತೀಯ ಕೊರತೆ ಎದುರಾಗಲಿದೆ ಅಂದಿದ್ದಾರೆ ಪ್ರಧಾನಮಂತ್ರಿಯ ಆರ್ಥಿಕ ಸಲಹೆಗಾರ ಎಂ.ಗೋವಿಂದ ರಾವ್. ಅಂದರೆ ಕೇಂದ್ರ ಸರ್ಕಾರದ ಬಜೆಟಿನ ಶೇ.1ರಷ್ಟು ಹೆಚ್ಚು ಆರ್ಥಿಕ ಕೊರತೆಯನ್ನು ನಾವು ಎದುರಿಸಬೇಕಾಗುತ್ತದೆ. ಭಾರತ ಇಂದು ಆರ್ಥಿಕ ಕೊರತೆಯ ಸಂಕಷ್ಟದ ಸುಳಿಯಲ್ಲಿ ನಲುಗುತ್ತಿರುವುದು ಏಕೆಂದು ಚಿಂತಿಸುತ್ತಾ ಹೋದರೆ ಕಾರಣಗಳ ನೂರಾರು ಪುಟಗಳು ತೆರದುಕೊಳ್ಳುತ್ತವೆ.
ಮೂಗಿಗಿಂತ ಮೂಗುತಿ ಭಾರ ಎಂಬ ಗಾದೆ ಮಾತು ನಮ್ಮ ವಿತ್ತೀಯ ಕೊರತೆಗೆ ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತದೆ. ಅದು ಕೇಂದ್ರ ಸರ್ಕಾರವೇ ಇರಲಿ, ರಾಜ್ಯ ಸರ್ಕಾರಗಳೇ ಇರಲಿ, ಬಜೆಟ್ ಮಂಡಿಸುವ ಸಂದರ್ಭದಲ್ಲಿ ಅವರ ಕಣ್ಣ ಮುಂದಿರುವುದು ಓಲೈಕೆ ರಾಜಕಾರಣ. ಯಾವ ಮತದಾರನನ್ನು ಹೇಗೆ ಓಲೈಸುವುದು ಎಂಬ ಲೆಕ್ಕಾಚಾರದಲ್ಲೇ ನಮ್ಮ ವಿತ್ತ ಮಂತ್ರಿಗಳು ಬಜೆಟ್ ಸಿದ್ಧಪಡಿಸಿದರೆ ಸಿದ್ಧಗೊಳ್ಳುವ ಬಜೆಟಿನ ಗಾತ್ರ ಹಿರಿದಾಗುತ್ತಾ ಹೋಗುತ್ತದೆಯೇ ಹೊರತು ಕಿರಿದಾಗುವುದಿಲ್ಲ. ಪ್ರತಿಯೊಂದು ಸರ್ಕಾರವೂ ತನ್ನ ಮೊದಲಿನ ಸರ್ಕಾರಕ್ಕಿಂತ ದೊಡ್ಡ ಬಜೆಟ್ ಮಂಡಿಸಿದ ಕೀರ್ತಿಯನ್ನು ಪಡೆಯಬೇಕು ಎಂಬ ಭ್ರಮಾಸಾಗರದಲ್ಲಿ ತೇಲಾಡುತ್ತಿರುವುದು ಕೂಡಾ ಬಜೆಟಿನ ಗಾತ್ರ ಹಿರಿದಾಗುವುದಕ್ಕೆ ಕಾರಣವಾಗಿದೆ. ಬಜೆಟ್ ಹಿರಿದಾರೆ ಸಮಸ್ಯೆಯೇನು? ವಿವಿಧ ಯೋಜನೆಗಳನ್ನು ಸಿದ್ಧಪಡಿಸಬೇಕು ಎಂದಾದರೆ ದೊಡ್ಡ ಬಜೆಟ್ ಬೇಕಲ್ಲವೇ? ಎಂಬೆಲ್ಲ ಪ್ರಶ್ನೆಗಳು ಕಾಡಬಹುದು.
ಯಾವುದೇ ಒಂದು ಸರ್ಕಾರ ಬಜೆಟ್ ಮಂಡಿಸುವಾಗ ತನಗೆಷ್ಟು ಆದಾಯ ಬಂದಿದೆ ಎಂಬುದನ್ನು ಮೊದಲು ಗಮನಿಸಬೇಕು. ಹಿಂದಿನ ವರ್ಷದಲ್ಲಿ ಬಂದ ಆದಾಯ, ಹಿಂದಿನ ವರ್ಷದ ಬಜೆಟ್ ಮತ್ತು ಆ ಬಜೆಟ್ ಮೊತ್ತವನ್ನು ತುಂಬಿಸುವುದಕ್ಕಿಂತ ಹೆಚ್ಚು ಆದಾಯ ಬಂದಿದೆಯೇ, ಬಜೆಟ್ ಮೊತ್ತಕ್ಕಿಂತ ಕಡಿಮೆ ಆದಾಯದಲ್ಲಿದ್ದು ತಾನು ಸಾಲದ ಸುಳಿಯಲ್ಲಿದ್ದೇನೆಯೇ ಎಂಬೆಲ್ಲ ವಿಚಾರಗಳನ್ನು ಗಮನಿಸಿ ಬಜೆಟ್ ಸಿದ್ಧಪಡಿಸಬೇಕಾದದ್ದು ಆರ್ಥಿಕ ಧರ್ಮ. ಆದರೆ ನಮ್ಮ ಸರ್ಕಾರಗಳು ಈ ಯಾವ ಅಂಶಗಳನ್ನೂ ಗಮನಿಸದೆ ಕೇವಲ ಸ್ವಪ್ರತಿಷ್ಠೆಯ ಭೂತದ ಹಿಂದೆ ಬಿದ್ದಿರುವುದು ವಿಪರ್ಯಾಸ. ಒಂದು ಮನೆಯನ್ನು ಎಷ್ಟು ಬೇಕಾದರೂ ಚಂದಗಾಣಿಸಬಹುದು,ಯಾವ ರೀತಿಯ ಅಲಂಕಾರಗಳನ್ನಾದರೂ ಮಾಡಬಹುದು. ಬುಡವೇ ಗಟ್ಟಿ ಇಲ್ಲ ಎಂದಾದರೆ? ಮನೆಯೊಳಗಿನ ಅಲಂಕಾರಕ್ಕೆ ಗಮನ ಕೊಡುವ ಮೊದಲು ಬುನಾದಿಯನ್ನು ಭದ್ರಪಡಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಅಂತೆಯೇ ಆರ್ಥಿಕ ವಿಚಾರ. ಒಂದು ದೇಶದ ಅಥವಾ ರಾಜ್ಯದ ಅಥವಾ ಯಾವುದೇ ನಗರಪಾಲಿಕೆ ಬಜೆಟ್ ಸಿದ್ಧಪಡಿಸುವ ಮೊದಲು ಆಯಾ ಆಡಳಿತ ವ್ಯಾಪ್ತಿಯ ಸಾಲಗಳನ್ನು ತೀರಿಸುವ ಕಡೆಗೆ ಗಮನ ಹರಿಸಬೇಕು. ದೊಡ್ಡ ಮೊತ್ತದ ಯೋಜನೆಗಳ ಕಡೆಗೆ ನಂತರ ಗಮನ ಕೊಡಬೇಕು. ಇಷ್ಟೆಲ್ಲ ಯೋಚನೆ ಮಾಡುವಂಥ ಸರ್ಕಾರಗಳು ಬಹುಶಃ ಸಿಗುವುದು ಕಷ್ಟ!
ನಮ್ಮ ಕೇಂದ್ರ ಸರ್ಕಾರವೂ ಸಾಲದ ಸುಳಿಯಲ್ಲಿಯೇ ಇದೆ. ಆದಾಗ್ಯೂ ದೇಶದ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಬಲ್ಲಂಥ ಆಹಾರಭದ್ರತಾ ಮಸೂದೆಯಂಥ ಮಸೂದೆಗಳನ್ನು ಜಾರಿಗೆ ತರುತ್ತಿದೆ. 'ಬಡಜನರ ಕಲ್ಯಾಣಕ್ಕಾಗಿ' ಎಂಬ ಹಣೆಪಟ್ಟಿಯೊಂದಿಗೆ ರೂಪಿಸಿದಂಥ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಉದ್ಯೋಗ ಖಾತ್ರಿಯಾಗುವ ಬದಲು ಭ್ರಷ್ಟಾಚಾರ ಖಾತ್ರಿಯಾಗಿದೆ! ಈ ಯೋಜನೆ ಮಾತ್ರವಲ್ಲ, ಬಹಳಷ್ಟು ಯೋಜನೆಗಳಲ್ಲಿ ಬಿಡುಗಡೆಯಾಗುವ ನಿಧಿಯಲ್ಲಿ ಸಿಂಹಪಾಲು ಭ್ರಷ್ಟರ ಪಾಲಾಗುತ್ತಿದೆ. ಒಂದು ಯೋಜನೆಗೆ ಒಂದು ರುಪಾಯಿ ನೀಡಿದರೆ ಅದರಲ್ಲಿ 10 ಪೈಸೆಯೂ ಯೋಜನೆಗೆ ಬಳಕೆಯಾಗುವುದಿಲ್ಲ ಎಂದು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಹೇಳಿದ್ದರು. ಆದರೂ ನಮ್ಮ ಯಾವ ಸರ್ಕಾರಗಳಿಂದಲೂ ಈ ಭ್ರಷ್ಟಾಚಾರವೆಂಬ ರಕ್ಕಸನನ್ನು ಸಂಹರಿಸುವುದಕ್ಕೆ ಸಾಧ್ಯವಾಗಲಿಲ್ಲ ಅಥವಾ ಅದಕ್ಕೆ ಪ್ರಯತ್ನಿಸುವ ಮನಸು ಅವುಗಳಿಗೆ ಇರಲೇ ಇಲ್ಲ ಎಂದು ಹೇಳುವುದು ಸೂಕ್ತ.
ಕೇಂದ್ರ ಸರ್ಕಾರ ಒಂದೇ ಎಲ್ಲದಕ್ಕೂ ಕಾರಣವಾಗುವುದಿಲ್ಲ. ಪ್ರತಿಯೊಂದು ರಾಜ್ಯ ಸರ್ಕಾರ, ನಗರಪಾಲಿಕೆಗಳು, ಪಂಚಾಯ್ತಿಗಳು ಕೂಡಾ ಇದಕ್ಕೆ ಕಾರಣವಾಗುತ್ತವೆ. ನಮ್ಮ ಕರ್ನಾಟಕ ಸರ್ಕಾರವೇ ಈ ತಿಂಗಳಾಂತ್ಯದಲ್ಲಿ 1 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸುವುದಕ್ಕೆ ಸಿದ್ಧವಾಗುತ್ತಿದೆ. ಅಷ್ಟು ಆದಾಯ ಇದೆಯೇ ಎಂದು ದಯವಿಟ್ಟು ಪ್ರಶ್ನಿಸಬೇಡಿ. ಬಜೆಟ್ ದೊಡ್ಡದಾಗಿ ಬಂಡವಾಳ ಕಡಿಮೆಯಾದರೆ ಆದಾಯ ಹುಟ್ಟಿಸುವುದಕ್ಕಾಗಿ ದೊಡ್ಡ ಮೊತ್ತದ ತೆರಿಗೆಯನ್ನು ಹೇರುವುದಕ್ಕೂ ನಮ್ಮ ಸರ್ಕಾರಗಳು ಸಿದ್ಧವಿರುತ್ತವೆ ಎಂಬುದನ್ನು ಮರೆಯಬೇಡಿ.
ಬೆಂಗಳೂರು ಮಹಾನಗರ ಪಾಲಿಕೆಯ ಕ್ರಮವನ್ನೇ ಗಮನಿಸಿ. ಕಳೆದ ಬಾರಿ 10,000 ಕೋಟಿ ರು. ಮೊತ್ತದ ಬಜೆಟ್ ಮಂಡಿಸಿದ್ದರ ಪರಿಣಾಮವಾಗಿ ಈಗ ಸಾಲದ ಹೆರೆಯನ್ನು ಹೊತ್ತುಕೊಂಡಿದೆ. ಅಗತ್ಯ ವೆಚ್ಚಗಳಿಗೆ ಹಣವಿಲ್ಲ ಅಂತ ಮಹಾನಗರದ ಅತಿದೊಡ್ಡ ಮಾರುಕಟ್ಟೆಯಾದ ಕೃಷ್ಣರಾಜ ಮಾರುಕಟ್ಟೆಯನ್ನೇ ಅಡ ಇಟ್ಟು 500 ಕೋಟಿ ರು.ಗಳ ಸಾಲವನ್ನು ಪಡೆದಿದೆ. ಇದು ಖಂಡಿತಕ್ಕೂ ಮುಂದಿನ ದಿನಗಳಲ್ಲಿ ಕಗ್ಗಂಟಾಗಿ ಪರಿಣಮಿಸಲಿದೆ.
ಒಂದು ದೇಶದ ಆದಾಯ ಹೆಚ್ಚಳಕ್ಕೆ ರಫ್ತು ಉದ್ಯಮವೂ ನೆರವಾಗುತ್ತದೆ. ಪಾಶ್ಚಾತ್ಯ ರಾಷ್ಟ್ರಗಳು, ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳಲ್ಲಿ ಆರ್ಥಿಕ ಹಿಂಜರಿತ ದಾಂಗುಡಿಯಿಡುತ್ತಿರುವ ಕಾರಣದಿಂದಾಗಿ ಆ ದೇಶಗಳು ತಮ್ಮ ವೆಚ್ಚಗಳನ್ನು ತಗ್ಗಿಸಿವೆ. ಆಮದು ಪ್ರಮಾಣವನ್ನು ಕಡಿಮೆಗೊಳಿಸಿವೆ. ಇದರ ಪರಿಣಾಮ ಭಾರತದ ಮೇಲೂ ಆಗಿದೆ. ಭಾರತದ ರಫ್ತು ಪ್ರಮಾಣ ಕಳೆದ ಏಪ್ರಿಲ್ ನಿಂದ ಡಿಸೆಂಬರ್ ವರೆಗಿನ ಅವಧಿಯಲ್ಲಿ ಬಹಳಷ್ಟು ಕುಸಿತ ಕಂಡಿದ್ದು, ಇದರಿಂದಾಗಿ 1270 ಕೋಟಿ ಡಾಲರ್ ವಹಿವಾಟು ನಷ್ಟವಾಗಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆಯ ಅಂಕಿ-ಅಂಶ ತಿಳಿಸುತ್ತದೆ. ಇದೇ ವೇಳೆ ಭಾರತದ ಆಮದು ಪ್ರಮಾಣ ಅಧಿಕವಾಗಿದೆ. ಇದು ಆರ್ಥಿಕ ನಷ್ಟದ ಮೇಲ ದೊಡ್ಡ ಹೊಡೆತವನ್ನೇ ನೀಡಿದೆ.
ಐರೋಪ್ಯ ರಾಷ್ಟ್ರಗಳು ಬುದ್ಧಿವಂತಿಕೆಯಿಂದ ತಮ್ಮ ವೆಚ್ಚ ತಗ್ಗಿಸಿ ಆರ್ಥಿಕ ದೃಢತೆ ಸಾಧಿಸುವುದಕ್ಕೆ ಪ್ರಯತ್ನ ಪಡುತ್ತಿರುವುದು ನಮ್ಮ ಸರ್ಕಾರಗಳಿಗೆ ಪಾಠವಾದೀತೇ? ಜಗತ್ತಿನಾದ್ಯಂತ ಎರಡನೇ ಸುತ್ತಿನ ಆರ್ಥಿಕ ಹಿಂಜರಿತ ತೀವ್ರಗೊಳ್ಳುತ್ತಿರುವಂಥ ಈ ದಿನಗಳಲ್ಲಿ ದೊಡ್ಡ ಯೋಜನೆಗಳನ್ನು ಹಾಕಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣವಲ್ಲ. ಅಭಿವೃದ್ಧಿ ಆಗಬೇಕು ನಿಜ. ಹಾಗಂತ ಸಾಲ ಮಾಡಿ ಮೃಷ್ಟಾನ್ನ ಭೋಜನ ಮಾಡಬೇಕೆ? ಒಂದು ವೇಳೆ ನಮ್ಮ ಸರ್ಕಾರಗಳು ಎಚ್ಚುತ್ತುಕೊಂಡು ಖರ್ಚು-ವೆಚ್ಚಗಳಿಗೆ (ಮುಖ್ಯವಾಗಿ ರಾಜಕಾರಣಿಗಳು ಸರ್ಕಾರಿ ಬೊಕ್ಕಸದಿಂದ ಮಾಡುವ ವೆಚ್ಚಕ್ಕೆ) ಕಡಿವಾಣ ಹಾಕುವುದಕ್ಕೆ ಕ್ರಮ ಕೈಗೊಳ್ಳದೇ ಹೋದಲ್ಲಿ, ಹಣಕ್ಕಾಗು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೃಷ್ಣರಾಜ ಮಾರುಕಟ್ಟೆಯನ್ನೇ ಅಡ ಇಟ್ಟಂತೆ ಭಾರತವನ್ನೇ ಅಡ ಇಡುವ ಪರಿಸ್ಥಿತಿ ಬಂದೀತು!

(article published in vijaya karnataka)

Comments

Popular posts from this blog

ಜ್ಞಾನೋದಯ (?)

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?

ಕಳೆದ ಬಾಲ್ಯವ ನೆನೆದು