'ಮಂಗಳನಲ್ಲಿ ಗಾಂಧಿ ಚಿತ್ರ'ದ ಜಾಡು ಹಿಡಿದು
ಮಂಗಳಗ್ರಹದಲ್ಲಿ ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಖದ ಚಿತ್ರ ಕಂಡಿದೆಯಂತೆ!
ಏನೋ ಒಂದು ಕಂಡ ತಕ್ಷಣ, ಏನಿರಬಹುದೆಂಬುದನ್ನು ಪರಾಮರ್ಶಿಸದೇ ಅದನ್ನು ಬಹಿರಂಗಪಡಿಸುವ ಹವ್ಯಾಸ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. 'ತಾನು ಕಂಡದ್ದನ್ನು ಹೇಳಿ ಅದಕ್ಕೆ ಪೇಟೆಂಟ್ ಪಡೆಯಬೇಕು. ಇಲ್ಲದಿದ್ದರೆ ಬೇರೆ ಯಾರಾದರೂ ಪೇಟೆಂಟ್ ಪಡೆಯುತ್ತಾರೆ' ಎಂಬ ಆತಕಂವೇ ಇದಕ್ಕೆ ಕಾರಣ ಎಂದೆನಿಸುತ್ತದೆ. ಅಲ್ಲದೆ ಆ ಚಿತ್ರ ಮಾನವ ಬಿಡಿಸಿದಂತಿದೆ ಎಂದು ವಿಜ್ಞಾನಿಗಳು ಹೇಳುತ್ತಿರುವುದನ್ನು ನೋಡಿದರೆ ಅದು ಶುದ್ಧ ಸುಳ್ಳು ಎಂದೆನಿಸುತ್ತದೆ. ಮಂಗಳನಲ್ಲಿ ಕಂಡಿದ್ದು ಚಿತ್ರವೇ ಹೌದಾದಲ್ಲಿ ಅದನ್ನು ಒಪ್ಪಿಕೊಳ್ಳಲು ಅಭ್ಯಂತರವೇನೂ ಇಲ್ಲ. ಅದು ಗಾಂಧೀಜಿಯ ಚಿತ್ರವಾಗಿದ್ದಲ್ಲಿ ಇನ್ನೂ ಹೆಮ್ಮೆಯಾಗುತ್ತದೆ. ಆದರೆ ಅಂಥ ಸಾಧ್ಯತೆಗಳು ಕ್ಷೀಣವಾಗಿರುವುದರಿಂದ ವೈಜ್ಞಾನಿಕ ಜಗತ್ತು ಮತ್ತೆ ಸುಳ್ಳು ಸುದ್ದಿ ಹಬ್ಬಿಸಿದ ಅಪಕೀರ್ತಿಗೆ ಮತ್ತೊಂದು ಬಾರಿ ಪಾತ್ರವಾಗುತ್ತದೆಯೇನೋ ಎಂಬ ಆತಂಕವಿದೆ, ನೋವಿದೆ.
ಹೀಗೊಂದು ಸುದ್ದಿ ಜೂನ್ 13ರಂದು ವೈಜ್ಞಾನಿಕ ವಲಯದಿಂದ ಪುಟಿದು ಬಂತು. ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಗೂ ಮಂಗಳಗ್ರಹಕ್ಕೂ ಎತ್ತಣಿಂದೆತ್ತ ಸಂಬಂಧ? ಸಂಶೋಧನೆಯ ಇನ್ನೂ ಒಂದು ಅಂಶ ಹೇಳುವ ಪ್ರಕಾರ ಈ ಚಿತ್ರವನ್ನು 'ಮಾನವರೇ' (?) ಕೆತ್ತಿದ್ದಾರೆ. ಯಾವ ರೀತಿ ನಾವು ಶಿಲೆಯಲ್ಲಿ ಕಲೆಯನ್ನು ಕೆತ್ತುತ್ತೇವೆಯೋ ಅಂಥದ್ದೇ ಒಂದು ಚಿತ್ರಣ ಇದು. ಈ ಚಿತ್ರ ಮಾತ್ರ ಖಡಾಖಂಡಿತವಾಗಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನೇ ಹೋಲುತ್ತದೆ.
ಯೂರೋಪಿನ ಮಾರ್ಸ್ ಎಕ್ಸ್ ಪ್ರೆಸ್ ಶೋಧನೌಕೆ ತೆಗೆದಂಥ ಮಂಗಳಗ್ರಹದ ಚಿತ್ರಗಳನ್ನು ಅಧ್ಯಯನ ಮಾಡಿದ ಇಟಲಿಯ ಬಾಹ್ಯಾಕಾಶ ಸಂಶೋಧಕ ಮಟ್ಟೆವೋ ಲಾನೆವೋ 'ಮಗಳನಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರ. ಅದರಲ್ಲಿ ಯಾವ ಅನುಮಾನವೂ ಇಲ್ಲ. ಮೀಸೆ, ದಟ್ಟ ಹುಬ್ಬುಗಳುಳ್ಳ, ಪೂರ್ಣ ಬಕ್ಕತಲೆಯ ಈ ಚಿತ್ರವು ಸ್ಪಷ್ಟವಾಗಿ ಗಾಂಧೀಜಿಯನ್ನು ಹೋಲುತ್ತದೆ' ಎಂದು ಹೇಳುತ್ತಾರೆ. ವಾದ ಏನೇ ಇರಲಿ! ಅಲ್ಲಿ ಕಾಣುತ್ತಿರುವುದು ಗಾಂಧೀಜಿಯ ಚಿತ್ರವೇ ಆಗಲಿ, ಬೇರೆ ಯಾರದ್ದೇ ಆಗಲಿ. ಮಂಗಳಗ್ರಹದಲ್ಲಿ ಕಂಡದ್ದೆಂದು ಹೇಳಿಕೊಳ್ಳುತ್ತಿರುವ ಚಿತ್ರವೊಂದು ವೈಜ್ಞಾನಿಕ ವಲಯದಲ್ಲಿ ಭಾರೀ ಅಚ್ಚರಿಯ ಅಲೆಗಳನ್ನು ಹುಟ್ಟಿಸಿದ್ದು, ವಿಜ್ಞಾನಿಗಳಲ್ಲಿ ಮಂಗಳನ ಸಂಶೋಧನೆಯ ಬಗ್ಗೆ ಇನ್ನಷ್ಟು ಪ್ರೇರೇಪಣೆ ನೀಡಿದ್ದಂತೂ ನಿಜ.
ಆದರೂ ಇಲ್ಲೊಂದು ಅನುಮಾನ ಕಾಡುತ್ತಿದೆ- 'ಮಂಗಳನಲ್ಲಿ ಗಾಂಧೀಜಿ ಚಿತ್ರ ಕಂಡಿದೆಯೆಂದು ಹೇಳಲಾಗುತ್ತಿರುವ ಮಾತುಗಳಲ್ಲಿ ಏನಾದರೂ ಪಿತೂರಿಯಿದೆಯೇ?'
ಗಾಂಧೀಜಿಯ ಹೆಸರನ್ನು ಬಳಸಿಕೊಂಡು ಪಿತೂರಿಯೇ? ಅಂಥ ದರ್ದು ಅವರಿಗೇನಿದೆ? ಇವೇ ಮುಂತಾದ ಪ್ರಶ್ನೆಗಳು ಉದ್ಭವಿಸಬಹುದು ನಿಜ. ವೈಜ್ಞಾನಿಕ ವಲಯದಲ್ಲಿ ಸೃಷ್ಟಿಯಾಗಿದ್ದ ಮತ್ತು ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗುತ್ತಿರುವ ವಿವಾದಗಳನ್ನು ಗಮನಿಸಿದರೆ ಅದ್ಯಾಕೋ 'ಪಿತೂರಿ'ಯ ಲಕ್ಷಣಗಳೇ ಕಾಣಿಸುತ್ತಿವೆ. '1969ರ ಜುಲೈ 20ರಂದು ಮಾನವ ಮೊದಲ ಬಾರಿಗೆ ಚಂದ್ರನಲ್ಲಿ ಇಳಿದ. ನಮ್ಮ ಅಪೋಲೋ ಗಗನನೌಕೆಯಲ್ಲಿ ಪ್ರಯಾಣಿಸಿದ ನೀಲ್ ಆರ್ಮ್ ಸ್ಟ್ರಾಂಗ್, ಮೈಕೆಲ್ ಕಾಲಿನ್ಸ್ ಮತ್ತು ಎಡ್ವಿನ್ ಬಝ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟರು' ಎಂದು ಅಮೆರಿಕ ಜಗತ್ತಿಗೆ ಸಾರಿತು. 'ಅಪೋಲೋ 11 ನನ್ನ ಕನಸುಗಳನ್ನು ನನಸಾಗಿದೆ' ಎಂದಿದ್ದರು ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ. ಆದರೆ ಇದಾದ ಕೆಲವೇ ದಿನಗಳಲ್ಲಿ ಅಂದಿನ ಸೋವಿಯಟ್ ರಷ್ಯಾದ ಸಂಯುಕ್ತ ಸಂಸ್ಥಾನ (ಯುಎಸ್ ಎಸ್ ಆರ್) ತನ್ನ 'ಪಿತೂರಿವಾದ'ವನ್ನು ಮಂಡಿಸಿತ್ತು.
ಈ ವಾದದಲ್ಲಿ ರಷ್ಯಾ 'ಅಮೆರಿಕದ ಗಗನಯಾತ್ರಿಗಳು ಚಂದ್ರನ ಮೇಲೆ ಕಾಲಿರಿಸಿಲ್ಲ. ಅದೆಲ್ಲ ಶುದ್ಧ ಸುಳ್ಳು' ಎಂದು ವಾದಿಸಿತು. ಅಂದಿನ ಕಾಲಘಟ್ಟದಲ್ಲಿ ಅಮೆರಿಕ ಮತ್ತು ಯುಎಸ್ ಎಸ್ ಆರ್ ನಡುವೆ ಇದ್ದಂಥ ಶೀತಲಕದನ ಇದಕ್ಕೆ ಕಾರಣವಾಗಿರಬೇಕು! ಯುಎಸ್ ಎಸ್ ಆರ್ ನ ವಾದವನ್ನು ಗಮನಿಸಿದಾಗ ಅಮೆರಿಕ ಸುಳ್ಳು ಹೇಳಿದೆ ಎಂದೇ ಅನಿಸುತ್ತದೆ. ಅದಕ್ಕೆ ಸಾಕ್ಷಿ ಎಂಬಂತೆ ಅದರ ನಂತರ ಒಂದೇ ಒಂದು ಬಾರಿಯೂ ಯಾವ ಮನುಷ್ಯನೂ ಸಹ ಕಾಲಿಟ್ಟಿಲ್ಲ. ಕಾಲಿಡುವುದು ಸಾಧ್ಯ ಎಂದಾಗಿದ್ದರೆ ಮತ್ತೊಂದು 'ಚಂದ್ರಸ್ಪರ್ಶ' ಸಾಧ್ಯವಾಗಬೇಕಿತ್ತು. ಅಂತಹ ಪ್ರಯತ್ನವನ್ನು, ಇತರ ದೇಶಗಳು ಹಾಗಿರಲಿ, ಸ್ವತಃ ಅಮೆರಿಕವೇ ಮಾಡಿಲ್ಲ ಎಂದಾದ ಮೇಲೆ ಅಂದು ಚಂದ್ರನ ಮೇಲೆ ಕಾಲಿರಿಸಿದ್ದು 'ಬಹುಕೋಟಿ ವೆಚ್ಚದ ಪ್ರಹಸನ' ಎಂದೇ ವಾದಿಸಬೇಕಾಗುತ್ತದೆ. ಇರಲಿ.
ಸದ್ಯ ಮಂಗಳನ ಮೇಲೆ ಗಾಂಧೀಜಿ ಚಿತ್ರ ಮೂಡಿದೆ ಎಂದು ಹೇಳಿಕೊಂಡಿರುವುದನ್ನು ಗಮನಿಸಿದಾಗ ಚಂದ್ರನ ಮೇಲೆ ನಡೆದಂಥ 'ಪಿತೂರಿಯೊಂದನ್ನು' ನೆನಪಿಸಿಕೊಳ್ಳಬೇಕಾಯಿತು. ಇಷ್ಟು ಹೇಳುವಾಗ ಇನ್ನೂ ಒಂದು ಪ್ರಶ್ನೆ ಮೂಡುತ್ತದೆ. ಅಂದು ಅಮೆರಿಕ ತಾನು ಚಂದ್ರನ ಮೇಲೆ ಕಾಲಿಟ್ಟಿದ್ದೇನೆಂದು ಹೇಳಿಕೊಂಡಾಗ ಯುಎಸ್ ಎಸ್ ಆರ್ ಜೊತೆಗೆ ಶೀತಲ ಕದನ ನಡೆಸುತ್ತಿತ್ತು. ಈಗ ಅಂಥ ಪರಿಸ್ಥಿತಿಯೇನೂ ಇಲ್ಲವಲ್ಲ? ಯುಎಸ್ ಎಸ್ ಆರ್ ಕೂಡಾ ಒಡೆದು ಚೂರುಚೂರಾಗಿದೆ. ಅಮೆರಿಕ ಬೇರೆ ಯಾರ ಜೊತೆಗೂ ಶೀತಲ ಕದನ ನಡೆಸುತ್ತಿಲ್ಲ. ಅಲ್ಲದೆ 'ಮಂಗಳನಲ್ಲಿ ಕಂಡದ್ದು ಗಾಂಧೀಜಿ ಚಿತ್ರ' ಅಂತ ಹೇಳಿಕೊಂಡದ್ದು ಇಟಲಿಯ ಖಗೋಳ ವಿಜ್ಞಾನಿ. ಇಟಲಿಯಂತೂ ಯಾರೊಂದಿಗೂ ಕಚ್ಚಾಡಿಕೊಳ್ಳುವ, ಇತರರಿಗಿಂತ ತಾನೇ ಮುಂದೆ ಎಂದು ಹೇಳಿಕೊಳ್ಳಬೇಕಾದಂಥ ಪರಿಸ್ಥಿತಿಯಲ್ಲಿಲ್ಲ. ಇಂತಿರುವಾಗ ಮಂಗಳನಲ್ಲಿ ಕಂಡದ್ದು ಗಾಂಧಿ ಚಿತ್ರ ಎಂದು ಹೇಳಿಕೊಂಡದ್ದನ್ನು 'ಪಿತೂರಿ' ಎಂದು ಬಣ್ಣಿಸಲಾದೀತೆ?
ಹೌದು. ಇದನ್ನು ಪಿತೂರಿ ಎಂದು ಹೇಳುವುದಕ್ಕೂ ಹಲವು ಕಾರಣಗಳಿವೆ. ಅದರಲ್ಲಿ ಒಂದು- ಸದ್ಯಕ್ಕೆ ವೈಜ್ಞಾನಿಕ ವಲಯವನ್ನು ಅತ್ಯಧಿಕವಾಗಿ ವ್ಯಾಪಿಸಿಕೊಂಡಿರುವುದು ಅನ್ಯಗ್ರಹ ಜೀವಿಗಳು (ಏಲಿಯೆನ್ಸ್). ಅನ್ಯಗ್ರಹ ಜೀವಿಗಳನ್ನು ನೋಡಿದ್ದೇವೆ ಎಂದು ಅಮೆರಿಕ ಪದೇ ಪದೇ ಹೇಳಿಕೊಂಡಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ತನ್ನ ಮಿಲಿಟರಿ ನೆಲೆಯಲ್ಲಿಯೇ ಅನ್ಯಗ್ರಹ ಜೀವಿಗಳ ಹಾರುವ ತಟ್ಟೆ (ಪ್ಲೇನ್ ಸಾಸರ್) ಬಂದಿಳಿದಿತ್ತು ಎಂದು ಅಮೆರಿಕದ ಮಿಲಿಟರಿ ಹಲವು ಚಿತ್ರಗಳನ್ನೂ ಬಹಿರಂಗಗೊಳಿಸಿತ್ತು. ನಮ್ಮನ್ಯಾರೋ ಅನ್ಯಗ್ರಹದ ಜೀವಿಗಳು ಹಿಂಬಾಲಿಸುತ್ತಿದ್ದಾರೆ. ನಮ್ಮ ಅಭಿವೃದ್ಧಿ ಯೋಜನೆಗಳನ್ನು, ಬಾಹ್ಯಾಕಾಶ ಯೋಜನೆಗಳನ್ನು ಗಮನಿಸುತ್ತಿದ್ದಾರೆ. ಅದನ್ನು ಹಾಳುಗೆಡಹುವ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ನಮ್ಮನ್ನು ನಾಶ ಮಾಡುವುದಕ್ಕೆ ಅನ್ಯಗ್ರಹ ಜೀವಿಗಳು ಪ್ರಯತ್ನ ಮಾಡುತ್ತಿದ್ದಾರೆ. ಅವರು ನಮಗಿಂತ ಎಲ್ಲ ವಿಚಾರಗಳಲ್ಲಿಯೂ ಮುಂದಿದ್ದಾರೆ. ಒಂದು ವೇಳೆ ಅನ್ಯಗ್ರಹ ಜೀವಿಗಳು ದಾಳಿ ಮಾಡಿದ್ದೇ ಆದಲ್ಲಿ ಅವರಿಂದ ಪಾರಾಗಲು ನಮ್ಮಿಂದ ಸಾಧ್ಯವೇ ಇಲ್ಲ ಎಂಬೆಲ್ಲ ಮಾತುಗಳು ವೈಜ್ಞಾನಿಕ ವಲಯವನ್ನು ಮಾತ್ರವಲ್ಲ, ಸದಾ ವೈಜ್ಞಾನಿಕ ವಲಯದ ಆಗುಹೋಗುಗಳನ್ನು ಗಮನಿಸುತ್ತಿರುವ ನಾಗರಿಕರನ್ನು ಕೂಡಾ ಆತಂಕದ ಕಡಲಿಗೆ ತಳ್ಳಿವೆ. 'ನಮ್ಮ ಕಥೆ ಮುಗಿದೇ ಹೋಯಿತು. ಇನ್ನು ನಾವು ಜೀವಿಸಿರುವುದು ಸಾಧ್ಯವೇ ಇಲ್ಲ' ಎಂಬ ಹತಾಶ ಭಾವವನ್ನೂ ಮೂಡಿಸಿವೆ. ಇದೀಗ ಮಂಗಳನಲ್ಲಿ ಮಾನವ ಚಿತ್ರವೊಂದನ್ನು ಕಂಡಿದ್ದೇವೆ. ಅದು ಮಾನವನೇ ರಚಿಸಿದಂತಿದೆ ಎಂದು ಹೇಳಿಕೊಂಡದ್ದರ ಹಿಂದೆ ಅನ್ಯಗ್ರಹ ಜೀವಿಗಳ ಬಗ್ಗೆ ಇನ್ನಷ್ಟು ಕುತೂಹಲಗಳನ್ನು ಸೃಷ್ಟಿಸುವ ಪ್ರಯತ್ನ ಏಕಿರಬಾರದು?
ಕಂಡಂಥ ಚಿತ್ರ ಗಾಂಧೀಜಿಯದ್ದೇ ಇರಲಿ, ಇನ್ಯಾರದ್ದೋ ಇರಲಿ. ಅದು ಪ್ರಶ್ನೆಯಲ್ಲ. ಅಲ್ಲಿನ ಕರಿಶಿಲೆಯ ಮೇಲೆ ಅಷ್ಟೊಂದು ಸ್ಪಷ್ಟವಾಗಿ ಚಿತ್ರ ರಚನೆಯಾಗುವುದಕ್ಕೆ ಸಾಧ್ಯವಿದೆಯೇ?
ಇನ್ನೊಂದು ಕಾರಣ- ಮಂಗಳನಲ್ಲಿ ಮಾನವ ಚಿತ್ರ ಕಂಡಿದ್ದೇವೆ ಎಂದು ಹೇಳಿಕೊಂಡದ್ದು ಇದೇ ಮೊದಲೇನಲ್ಲ. 1976ರಲ್ಲಿ ಕೂಡಾ ಇಂಥದ್ದೇ ಒಂದು ಸುದ್ದಿ ಹಬ್ಬಿತ್ತು. ಅಮೆರಿಕದ ವಿಕಿಂಗ್-1 ಗಗನನೌಕೆ ತೆಗೆದಂಥ ಮಂಗಳನ ಚಿತ್ರವನ್ನು ನೋಡಿಕೊಂಡು 'ಮಂಗಳನಲ್ಲಿ ಮಾನವನ ಮುಖವನ್ನೇ ಹೋಲುವಂಥ ಚಿತ್ರವೊಂದು ಕಂಡಿದೆ' ಎಂದು ಅಮೆರಿಕದ ವಿಜ್ಞಾನಿಗಳು ಹೇಳಿಕೊಂಡಿದ್ದರು. ನಂತರ ಇದೇ ವಿಚಾರವಾಗಿ ಹೆಚ್ಚಿನ ಸಂಶೋಧನೆಗಳು ನಡೆದಾಗ ಅದು ಮಾನವನ ಮುಖವಲ್ಲ, ದೊಡ್ಡದೊಂದು ಬೆಟ್ಟ. ಆ ಬೆಟ್ಟವೇ ಮಾನವನ ಮುಖದ ಆಕಾರದಲ್ಲಿ ಕಂಡಿದೆ ಎಂಬ ಸತ್ಯ ಬಹಿರಂಗಗೊಂಡಿತ್ತು. ಈಗಲೂ ಅಂಥದ್ದೇ ಒಂದು ಅವಾಂತರ ಯಾಕೆ ಘಟಿಸಿರಬಾರದು ಎಂಬುದು ನನ್ನ ಪ್ರಶ್ನೆ.
ದೂರದ ಬೆಟ್ಟ ನುಣ್ಣಗೆ ಎಂಬ ಗಾದೆ ಮಾತಿದೆ. ಇಲ್ಲೂ ಇದೇ ಗಾದೆ ಅನ್ವಯವಾಗಿರಬಾರದೇಕೆ? ವಿಜ್ಞಾನಿಗಳೇನೂ ಮಂಗಳ ಗ್ರಹದ ಮೇಲಿಳಿದು ಸಂಶೋಧನೆ ನಡೆಸಿಲ್ಲ. ಗಾಂಧೀಜಿ ಮುಖದ ಚಿತ್ರ ಕಂಡಿದೆ ಎಂದು ಹೇಳಿಕೊಳ್ಳಲಾಗುವ ಕರಿಶಿಲೆಯ ಸಮೂಪಕ್ಕೆ ಹೋಗಿ ಪರಿಶೀಲಿಸಿಲ್ಲ. ಉಪಗ್ರಹವೊಂದು ಹಲವು ಸಾವಿರ ಕಿಲೋಮೀಟರ್ ದೂರದಿಂದ ತೆಗೆದಂಥ ಚಿತ್ರವೊಂದನ್ನು ಝೂಮ್ ಮಾಡಿ ನೋಡಿದಾಗ ಅದು ಗಾಂಧೀಜಿಯ ಮುಖದಂತೆ ಕಂಡಿರಬಹುದು. ಮಂಗಳಗ್ರಹದ ಬಗ್ಗೆ ಸಂಶೋಧನೆಗಳು ಅಧ್ಯಯನಗಳು ಹೆಚ್ಚುತ್ತಿರುವಂಥ ಈ ಕಾಲಘಟ್ಟದಲ್ಲಿ ಕಾಣಿಸಿಕೊಂಡಂಥ ಯಾವುದೇ ಒಂದು ಆಕಾರ ವಿಜ್ಞಾನಿಗಳ ಕುತೂಹಲ ಕೆರಳಿಸಿರಬಹುದು. ಅಬ್ಬಾ ಸಿಕ್ಕೇ ಬಿಡ್ತು ಎಂಬ ಭಾವವನ್ನು ಮೂಡಿಸಿರಬಹುದು- ಮರಳುಗಾಡಿನಲ್ಲಿ ಓಯಸಿಸ್ ಕಂಡಂತೆ!
ಇವೆರಡೂ ಕಾರಣಗಳಲ್ಲಿ ನನಗೆ ದಟ್ಟ ಸಾಧ್ಯತೆ ಕಾಣುವುದು ಮೊದಲನೆಯ ಕಾರಣವೇ. ವೈಜ್ಞಾನಿಕ ವಲಯದಲ್ಲಿ ದಟ್ಟವಾಗಿ ಹಬ್ಬಿರುವ ಅನ್ಯಗ್ರಹ ಜೀವಿಗಳ ಭೀತಿಯನ್ನು ಎನ್ ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ಇದು ಎನಿಸುತ್ತದೆ. ಇದಕ್ಕೆ ಕಾರಣವೂ ಇದೆ. ಅನ್ಯಗ್ರಹ ಜೀವಿಗಳ ಬಗ್ಗೆ ಚರ್ಚೆ ಹೆಚ್ಚಾಗುತ್ತಿದ್ದಂತೆ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳಿರುವ ಸಾಧ್ಯತೆಗಳನ್ನು ಗುರುತಿಸಿದ್ದು ಮಂಗಳ ಗ್ರಹದಲ್ಲಿ. ಅನ್ಯಗ್ರಹ ಜೀವಿಗಳು ಅಂತಿದ್ದರೆ ಈ ಗ್ರಹದಲ್ಲಿಯೇ ಇರಬೇಕು ಎಂಬ ವಾದ ಮೂಡಿದ್ದೇ ತಡ ಮಂಗಳನ ಬಗ್ಗೆ ಕುತೂಹಲ ಹೆಚ್ಚಿತು. ಈಗಲೂ ಅಷ್ಟೆ- ವಿಜ್ಞಾನಿಗಳಿಗೆ ಮಂಗಳನಿನ್ನೂ ಹಲವು ಸತ್ಯಗಳನ್ನು ಅಡಗಿಸಿಟ್ಟುಕೊಂಡಿರುವ ಕೌತುಕ! ಅಲ್ಲಿ ನೀರಿದೆ, ಮಾನವ ವಾಸಿಸಬಹುದಾದಂಥ ವಾತಾವರಣವೂ ಸಿಗಬಹುದು. ಮಂಜಿನ ಗಡ್ಡೆಯ ರೂಪದಲ್ಲಿ ಭಾರೀ ಪ್ರಮಾಣದ ನೀರಿದೆ ಎಂಬೆಲ್ಲ ವಿಚಾರಗಳು ಮಂಗಳನ ಶೋಧದಿಂದ ತಿಳಿದು ಬಂದಾಗ ಅಲ್ಲಿ ಅನ್ಯಗ್ರಹ ಜೀವಿಗಳಿರಬಹುದೆಂಬ ಚಿಂತನೆ ಮೂಡಿದ್ದು ತೀರಾ ಸಹಜ. ಅದೇ ಭಾವನೆಗೆ ಪುಷ್ಟಿ ಕೊಡುವ ಪ್ರಯತ್ನ ನಡೆಯುತ್ತಿದೆಯೇನೋ ಎನಿಸುತ್ತಿದೆ.
ನಿಜ. ಈಗ ಯಾವ ದೇಶಗಳ ಮಧ್ಯೆಯೂ ಶೀತಲ ಕದನ ಇಲ್ಲ. ಆದರೆ ಅನ್ಯಗ್ರಹ ಜೀವಿಗಳನ್ನು ಗುರುತಿಸುವಲ್ಲಿ ಪೈಪೋಟಿಯಿದೆ. 'ನಾವು ಕಂಡಿದ್ದೇವೆ, ನಾವೂ ನೋಡಿದ್ದೇವೆ' ಎಂಬ ಉದ್ಘಾರಗಳು ಆಗಾಗ್ಗೆ ಕೇಳಿಬರುತ್ತಿವೆ. ಇದನ್ನೇ ಮಾರಾಟದ ಸರಕಾಗಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯೇನೋ ಎಂಬ ಸಣ್ಣ ಅನುಮಾನ ಕಾಡುತ್ತಿದೆ. ಅನ್ಯಗ್ರಹ ಜೀವಿಗಳ ಕಲ್ಪನೆಯೇ ಸುಳ್ಳು ಎಂದು ಹೇಳುತ್ತಿಲ್ಲ. ಸ್ಪಷ್ಟವಾದ ಸಾಕ್ಷ್ಯಗಳಿಲ್ಲದೆ ಅನ್ಯಗ್ರಹ ಜೀವಿಗಳಿದ್ದಾವೆಂದು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೊಂದು ವೇಳೆ ಅನ್ಯಗ್ರಹ ಜೀವಿಗಳಿದ್ದದ್ದೇ ಆಗಿದ್ದ ಪಕ್ಷದಲ್ಲಿ ಮತ್ತು ಆ ಜೀವಿಗಳು ನಮಗಿಂತ ಹೆಚ್ಚು ಅಭಿವೃದ್ಧಿ ಹೊಂದಿದವರಾಗಿದ್ದು, ನಮ್ಮ ಮೇಲೆ ದಾಳಿ ನಡೆಸುವಂಥವರೇ ಆಗಿದ್ದಂಥ ಸಂದರ್ಭದಲ್ಲಿ ಈ ದಾಳಿ ಅದ್ಯಾವಾಗಲೋ ಘಟಿಸಿಯಾಗಿರಬೇಕಿತ್ತು.

Comments
Post a Comment