ಜನರಿಗೆ ಧ್ವನಿಯಾಗುವ ನಮ್ಮ ನೋವು ಯಾರಿಗೂ ಕೇಳಿಸದೆ?


ಜೀವದ ಬೆಲೆ ಏನು ಎಂಬುದನ್ನು ಪ್ರತಿಕ್ಷಣವೂ ಕಣ್ಣಾರೆ ಕಾಣುತ್ತಿದ್ದರೂ, ಜೀವದ ಹಂಗನ್ನು ಬಿಟ್ಟವರು ನಾವು. ಸಾವಿನ ಘೋರ ದೃಶ್ಯಗಳು, ಬರ್ಬರ ಹತ್ಯೆಯ ಕ್ಷಣಗಳು ಮಾನವ ಸಹಜವಾಗಿಯೇ ವಿವಿಧ ಭಾವನೆಗಳ ತಲ್ಲಣವನ್ನು ನಮ್ಮೆದೆಯಲ್ಲಿ ಎಬ್ಬಿಸಿದರೂ ಅವುಗಳ ಕಡೆಗೊಂದು ನಿರ್ಲಿಪ್ತ ದೃಷ್ಟಿಯನ್ನು ಬೀರಿ 'ವೃತ್ತಿಃ ಪರಮೋಧರ್ಮಃ' ಎಂಬ ತತ್ತ್ವಕ್ಕೆ ಬದ್ಧರಾಗಿ ಕೆಲಸ ಮಾಡುವವರು. ಇಷ್ಟು ವಿವರಣೆ ಕೊಡುವಾಗಲೇ ನಾವು ಪತ್ರಕರ್ತರು ಎಂಬುದು ಗೊತ್ತಾಗಿರಬಹುದು. 
ಜೀವನವೇ ಹಾಗೆ. ಅದು ಎಳೆದುಕೊಂಡು ಹೋದತ್ತ ಸಾಗುವುದಷ್ಟೇ ಜೀವಿಗಳಿಂದ ಸಾಧ್ಯ. ಆದರೆ ಅದೆಷ್ಟೋ ಬಾರಿ ನಾವು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳಬೇಕಾಗುತ್ತದೆ. ತಾನು ಹೋಗೆನೆಂಬ ಹಠಮಾರಿ ಭಾವವನ್ನು ಹೊಮ್ಮಿಸುವ ಜೀವನವನ್ನು ನಮಗೆ ಬೇಕಾದ ದಿಕ್ಕಿನತ್ತ ಸೆಳೆದುಕೊಳ್ಳಬೇಕಾಗುತ್ತದೆ. ಸಾಮಾನ್ಯ ಸಮಾರಂಭಗಳಲ್ಲಿ ಭಾಗವಹಿಸಿ ವರದಿ ಮಾಡುವಾಗ ಇರುವ ನೆಮ್ಮದಿ, ಅಪರಾಧ ಜಗತ್ತಿನ ಬಗ್ಗೆ, ಯುದ್ಧದ ಕ್ಷಣಗಳ ಬಗ್ಗೆ ವರದಿ ಮಾಡುವಾಗ ಅದೆಷ್ಟೋ ದೂರಕ್ಕೆ ಓಡಿ ಹೋಗಿರುತ್ತದೆ. ಟಿವಿ ಮಾಧ್ಯಮಗಳ ಪ್ರಭಾವದಿಂದಾಗಿ 'ನಾ ಮೊದಲು ವರದಿ ಮಾಡಬೇಕು, ಬ್ರೇಕಿಂಗ್ ನ್ಯೂಸ್ ನಾನೇ ಕೊಡಬೇಕು' ಎಂಬ ಧಾವಂತ ಮುದ್ರಣ ಮಾಧ್ಯಮಗಳಲ್ಲಿ ಕೊಂಚ ಕಡಿಮೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಂತ ಅದೆಷ್ಟೋ ಬಾರಿ ಟಿವಿ ಮಾಧ್ಯಮಗಳಿಗಿಂತ ವೇಗವಾಗಿ, ಅವುಗಳಿಗೆ ಸಿಗದ ಸುದ್ದಿಯನ್ನು ಮುಖಪುಟದಲ್ಲೇ ಪ್ರಕಟಿಸಿದ ದಾಖಲೆಗಳೂ ಇಲ್ಲವೆಂದಲ್ಲ. ಅದು ಮುದ್ರಣ ಮಾಧ್ಯಮವಿರಲಿ, ವಿದ್ಯುನ್ಮಾನ ಮಾಧ್ಯಮವೇ (ಟಿವಿ, ರೇಡಿಯೋ) ಇರಲಿ, ನಾವೆಲ್ಲರೂ ಪತ್ರಕರ್ತರು. ಹೆಚ್ಚೂ ಕಮ್ಮಿ ಎಲ್ಲರ ಜೀವನದ ರೀತಿಯೂ, ಗತಿಯೂ ಒಂದೇ.

ಸಮಯದ ಮಹತ್ವ ಎಷ್ಟು ಎಂಬುದನ್ನು ಅರಿಯಬೇಕಾದರೆ ಪತ್ರಕರ್ತರೇ ಆಗಬೇಕು, ಪತ್ರಕರ್ತ ಒಂದು ಸೆಕೆಂಡ್ ತಡವಾದರೂ ಅದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಗುತ್ತದೆ. ನಮಗೆ ಹಗಲು, ರಾತ್ರಿಯ ಪರಿವೆಯೇ ಇಲ್ಲ. ನಮ್ಮ ಓದುಗರಿಗೆ ಹೊಸ ಹೊಸ ಸುದ್ದಿಗಳನ್ನು ಕೊಡಬೇಕೆಂಬ ತುಡಿತದಲ್ಲಿ ಅದೆಷ್ಟೋ ಬಾರಿ ನಿದ್ದೆಗೇ ತಿಲಾಂಜಲಿ ನೀಡುವುದಿದೆ. ಸಾರ್ವಜನಿಕರ ನೋವುಗಳನ್ನು, ಅವರ ಕಷ್ಟಗಳನ್ನು, ಅವರ ಅಗತ್ಯಗಳನ್ನು ಸರ್ಕಾರಕ್ಕೆ ತಲುಪಿಸುವಂಥ ಮಹತ್ವದ ಕಾಯಕ ನಮ್ಮ ಮುಂದಿರುವಾಗ ಉಳಿದದ್ದೆಲ್ಲ ಗೌಣ ಎಂಬ ಭಾವನೆಯೇ ನಮಗೆ ಹೆಚ್ಚು ಖುಷಿ ಕೊಡುತ್ತದೆ. ನಮ್ಮಲ್ಲೂ ಹಲವು ಸಮಸ್ಯೆಗಳಿರಬಹುದು, ಇಲ್ಲ ಎಂದು ಸಾರಾಸಗಟು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ. ನಮ್ಮವರ ಪೈಕಿ ಎಲ್ಲೋ ಒಂದಷ್ಟು ಜನರಲ್ಲಿ ಕೊರತೆಗಳಿವೆ ಎಂದ ಮಾತ್ರಕ್ಕೇ ಅದನ್ನು ಎಲ್ಲರಿಗೂ ಅನ್ವಯಿಸುವುದಕ್ಕಾಗುವುದೂ ಇಲ್ಲ. ಹಾಗೆ ನೋಡಿದರೆ ಸಮಸ್ಯೆಗಳು, ಕೊರತೆಗಳು ಇಲ್ಲದ ಜಾಗಗಳೇ ಇಲ್ಲ. ಮನುಷ್ಯ ಎಂದ ಮೇಲೆ ಆತನಲ್ಲಿ ವಿವಿಧ ರೀತಿಯ ವ್ಯಕ್ತಿತ್ವ ಇರುವುದು ಸಹಜ.
ಇರಲಿ, ಪ್ರತಿಕ್ಷಣವೂ ಹೊಸ ಹೊಸ ಸುದ್ದಿಗಳಿಗಾಗಿ ತುಡಿಯುವ ನಮಗೆ ಜೀವನದಲ್ಲಿ ಆಶೆಗಳಿಲ್ಲವೇ? ನಮಗೂ ಹೆಂಡತಿ, ಮಕ್ಕಳು, ಕುಟುಂಬ ಎಂಬುದೆಲ್ಲ ಇರುತ್ತದೆಯಲ್ಲ! ಸಮಯವನ್ನು ಪಕ್ಕಕ್ಕಿಟ್ಟು ಕೆಲಸವನ್ನೇ ಮುಂಚೂಣಿಗೆ ತರುವಾಗ ಅದರೆಡೆಯಲ್ಲಿಯೂ ನಮ್ಮ ಕುಟುಂಬದವರ ಸಮಸ್ಯೆಗಳಿಗೂ ಓಗೊಡಬೇಕಾಗುತ್ತದೆ. ನಮ್ಮವರ ಬಗ್ಗೆ, ನಮ್ಮ ಕೆಲಸದ ಬಗ್ಗೆ ನಾನಾ ರೀತಿಯಿಂದ ಮಾತಾಡಿಕೊಳ್ಳುವ ಜನರು ನಮ್ಮದೇ ಸಮಸ್ಯೆಗಳ ಬಗ್ಗೆ ಮಾತ್ರ ಯೋಚಿಸುವುದಿಲ್ಲವಲ್ಲ ಎಂಬುದನ್ನು ನೆನೆದಾಗ ದುಃಖವಾಗುತ್ತದೆ. ಹೃದಯ ನೋವಿನಿಂದ ಚೀರಿಡುತ್ತದೆ.

ಹಿಂದಿನ ದಿನಗಳಲ್ಲಿ ಪತ್ರಕರ್ತ ಎಂದರೆ ಜುಬ್ಬಾ, ಪೈಜಾಮಾ ತೊಟ್ಟು, ಜೋಳಿಗೆಯಂಥ ಒಂದು ಚೀಲವನ್ನು ಹೆಗಲಿಗೇರಿಸಿಕೊಂಡು, ಕೈಯಲ್ಲೊಂದು ಪೆನ್ನು, ಮೂಗಿನ ಮೇಲೆ ದಪ್ಪ ಕನ್ನಡಕ ಹಾಕಿಕೊಂಡಂಥ ವ್ಯಕ್ತಿ. ಪತ್ರಕರ್ತ ಎಂದ ಮೇಲೆ ಆತ ಬಡವ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ ಎಂಬ ಭಾವನೆ ಇತ್ತು. ಕಷ್ಟದ ಜೀವನ ನಡೆಸುತ್ತಾ, ಸಾಲದ ಸುಳಿಯಲ್ಲಿ ಮುಳುಗೇಳುತ್ತೇ ಹೇಗೋ ಜೀವನದ ಸಂಧ್ಯಾಕಾಲಕ್ಕೆ ಬಂದಾಗ ಏನೋ ಒಂದಷ್ಟು ಸವಲತ್ತುಗಳನ್ನು ಮಾಡಿಕೊಂಡರೆ ಮುಗಿಯಿತು ಎಂಬಂಥ ಸ್ಥಿತಿಯಿತ್ತು. ಇಂಥ ಕಡುಬಡತನದ ಸ್ಥಿತಿ ಈಗ ನಮ್ಮವರಿಗಿಲ್ಲ, ಮಾಧ್ಯಮವೆಂಬುದು ಈಗ ಒಂದು ಉದ್ಯಮವಾಗಿ ಬೆಳೆದಿದೆ ಎಂಬುದೂ ನಿಜ. ಹಾಗಿದ್ದರೆ ಪತ್ರಕರ್ತರಿಗೇನು ಸಮಸ್ಯೆ? ಎಂದು ನೀವು ಕೇಳಬಹುದು. ನಮಗೆ ಸಮಸ್ಯೆ ಇರುವುದು ಹಣದ್ದಲ್ಲ. ರಕ್ಷಣೆಯದ್ದು. ದೇಶದ ರಕ್ಷಣೆಯ ಬಗ್ಗೆ ಪುಟಗಟ್ಟಲೆ ಬರೆಯುತ್ತೇವೆ. ಕಳ್ಳರಿಂದ, ದರೋಡೆಕೋರರಿಂದ, ಕೊಲೆಗಾರರಿಂದ, ಅಂಡರ್ ವರ್ಲ್ಡ್ ನಿಂದ ದೇಶದ ನಾಗರಿಕರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪುಟಗಟ್ಟಲೆ ಬರೆಯುತ್ತೇವೆ. ವಿಶೇಷ ಪ್ರೋಗ್ರಾಮ್ ಗಳನ್ನು ಟಿವಿ ಪರದೆಯ ಮೇಲೆ ಮೂಡಿಸುತ್ತೇವೆ. ವಿವಿಧ ವಿಷಯಗಳ ಬಗ್ಗೆ ರಾಜಕಾರಣಿಗಳೊಂದಿಗೆ, ಅಧಿಕಾರಿಗಳೊಂದಿಗೆ, ವಿಜ್ಞಾನಿಗಳೊಂದಿಗೆ, ವೈದ್ಯರು, ಪೊಲೀಸರು ಮತ್ತಿತರ ಪ್ರಮುಖರೊಂದಿಗೆ ಚರ್ಚೆ ನಡೆಸುತ್ತೇವೆ. ಅವರೊಂದಿಗೆ ಸಂದರ್ಶನ ನಡೆಸಿ ಅದನ್ನು ಓದುಗರಿಗೆ ಉಣಬಡಿಸುತ್ತೇವೆ. ಸಮಾಜದಲ್ಲಾಗುತ್ತಿರುವ ಪ್ರತಿಯೊಂದು ಘಟನೆಗಳ ಮಾಹಿತಿಯನ್ನು ಜನರಿಗೆ ಕೊಡುವುದು ಕರ್ತವ್ಯ ಎಂಬಂತೆ ಭಾವಿಸಿದ್ದೇವೆ. ವಿವಿಧ ಮಾಫಿಯಾಗಳು, ದಂಧೆಗಳು ದೇಶದ ಸಂಪತ್ತನ್ನು, ಆಸ್ತಿಯನ್ನು ಕೊಳ್ಳೆ ಹೊಡೆಯುವುದು ನಮ್ಮ ಗಮನಕ್ಕೆ ಬಂದಾಗ ಅದರ ಬಗ್ಗೆ ತಕ್ಷಣವೇ ಜನರಿಗೆ ಮಾಹಿತಿಯನ್ನು ನೀಡುತ್ತೇವೆ. ದೇಶದಲ್ಲಿ ರಕ್ಷಣೆ, ಭದ್ರತೆಯ ಕೊರತೆ ಕಂಡಾಗ ತಕ್ಷಣವೇ ಸರ್ಕಾರವನ್ನು ಎಚ್ಚರಿಸಿ, ಈ ಕಡೆಗೆ ಅದರ ಲಕ್ಷ್ಯವನ್ನು ಸೆಳೆಯುತ್ತೇವೆ. ದೇಶಕ್ಕೆ ಆಪತ್ತು ಎದುರಾಗದಂತೆ ನೋಡಿಕೊಳ್ಳುತ್ತೇವೆ. ಹೀಗಿರುವಾಗ ನಮ್ಮ ರಕ್ಷಣೆಯನ್ನು ಯಾರು ನೋಡಿಕೊಳ್ಳಬೇಕು? ನಮಗೆ ಆಪತ್ತೆದುರಾದರೆ ಅದನ್ನು ನಾವು ಯಾರ ಬಳಿ ಹೇಳಿಕೊಳ್ಳಬೇಕು?

ಮೊನ್ನೆ ಹೀಗೆಯೇ ಆಯಿತು. ನಮ್ಮವರೇ ಆದ ಜೆ ಡೇ ಎಂದೇ ಹೆಸರುವಾಸಿಯಾಗಿದ್ದ ಜ್ಯೋತಿರ್ಮಯಿ ಡೇ ಅವರನ್ನು ಹಾಡುಹಗಲೇ ಗುಂಡಿಟ್ಟು ಹತ್ಯೆ ಮಾಡಲಾಯಿತು. ಅಂಡರ್ ವರ್ಲ್ಡ್ ಡಾನ್ ಛೋಟಾ ರಾಜನ್ ಈ ಹತ್ಯೆಯ ರೂವಾರಿ ಎಂಬ ಆರೋಪವಿದೆ. ಆದರೆ ಇದಿನ್ನೂ ಸಾಬೀತಾಗಿಲ್ಲ. ಛೋಟಾ ರಾಜನ್ನೋ ಅಥವಾ ಇನ್ಯಾರೋ ಒಟ್ಟಿನಲ್ಲಿ ನಮ್ಮವರನ್ನು ಹತ್ಯೆ ಮಾಡಿರುವುದು ಭೂಗತ ಜಗತ್ತಿನ ದೊರೆಗಳು ಎಂಬುದು ದಿಟ. ದೇಶದಲ್ಲಿ ನಡೆಯುತ್ತಿರುವ ತೈಲ ಮಾಫಿಯಾದ ಬಗ್ಗೆ 'ಡೇ' ವರದಿ ಮಾಡಿದ್ದೇ ತಪ್ಪಾಯ್ತು ನೋಡಿ. ದೇಶದ ಸಂಪತ್ತು ಸೋರಿ ಹೋಗುತ್ತಿದೆ. ಸಾಮಾನ್ಯ ಜನ ದುಬಾರಿ ಬೆಲೆ ತೆತ್ತು ತೈಲವನ್ನು ಕೊಂಡುಕೊಳ್ಳುತ್ತಿದ್ದರೆ, ಆ ಸಂಪತ್ತನ್ನೆಲ್ಲ ಭೂಗತ ಜಗತ್ತು ಕೊಳ್ಳೆ ಹೊಡೆಯುತ್ತಿದೆ. ಇದನ್ನು ತಡೆದರೆ ಜನಸಾಮಾನ್ಯರಿಗೇ ಉಪಕಾರವಾದೀತು ಎಂಬ ಕಳಕಳಿಯೇ ನಮ್ಮವರಿಗೆ ಮುಳುವಾಯಿತಲ್ಲ! ದೇಶದ್ರೋಹಿಗಳ ಕೃತ್ಯಗಳ ಮೇಲೆ ಬೆಳಕು ಚೆಲ್ಲುವಾಗ ದೇಶ ಕಾಯುವ ಸೈನಿಕನ ತೆರದಿ ನಾವು ಕೆಲಸ ಮಾಡುತ್ತೇವೆ. 'ಜೀವ ಉಳಿದರಷ್ಟೇ ನಾಳೆ ಎಂಬುದನ್ನು ನೋಡುತ್ತೇನೆ' ಎಂಬ ಸತ್ಯದ ಅರಿವಿದ್ದರೂ ಈ ಬಗ್ಗೆ ನಿರ್ಲಿಪ್ತರಾಗಿ ಕೆಲಸ ಮಾಡುತ್ತೇವೆ.

ರಾಜಕಾರಣಿಗಳ ವಿವಿಧ ಹಗರಣಗಳು, ಅವ್ಯವಹಾರಗಳು, ಸಾಮಾನ್ಯ ಜನತೆಯ ಮೇಲೆ ಹೊರೆ ಹೊರಿಸುವ ತಂತ್ರಗಳ ಬಗ್ಗೆ ವರದಿ ಮಾಡುತ್ತೇವೆ. ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ನಾವು ಮುನ್ನುಗ್ಗುತ್ತೇವೆ. ನಮ್ಮ ಹಕ್ಕುಗಳನ್ನು ಯಾರು ರಕ್ಷಿಸಬೇಕು? ನಡುಬೀದಿಯಲ್ಲಿ ದುಷ್ಟರು ನಮ್ಮನ್ನು ಗುಂಡಿಟ್ಟು ಕೊಂದರೆ ನಮಗಾದ ಹಾನಿಯನ್ನು ನಾವು ಯಾರ ಬಳಿ ಹೇಳಿಕೊಳ್ಳಲಿ? ಒಬ್ಬ ಪತ್ರಕರ್ತನನ್ನು ಕಳೆದುಕೊಂಡ ಮಾಧ್ಯಮ ಜಗತ್ತಿನ ಬಗ್ಗೆ ಯಾರಿಗೂ ಏನೂ ಅನ್ನಿಸುವುದೇ ಇಲ್ಲವಲ್ಲ. ನಮ್ಮವರನ್ನು ಕೊಂದ ಅಂಡರ್ ವರ್ಲ್ಡ್ ಜಗತ್ತಿಗೆ ಶಿಕ್ಷೆಯಾಗುತ್ತದೆ ಎಂದೂ ಅನ್ನಿಸುವುದಿಲ್ಲ. ಜೇ ಡೇ ಅವರು ಇಲ್ಲಿ ಉದಾಹರಣೆ ಅಷ್ಟೆ. ಇಂಥ ಪರಿಸ್ಥಿತಿಯನ್ನು ಪ್ರತಿಯೊಬ್ಬ ಪತ್ರಕರ್ತನೂ ಎದುರಿಸುತ್ತಾನೆ. ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಕ್ಷಣದಿಂದಲೇ ನಾವು ಜೀವದ ಬಗೆಗಿನ ಮಮಕಾರವನ್ನು ಬಿಟ್ಟುಬಿಡಬೇಕಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದೇನೋ?
ವಿವಿಧ ವರ್ಗಗಳ, ಸಮುದಾಯಗಳ, ವಿವಿಧ ಜೀವಿಗಳ ರಕ್ಷಣೆಗೆಂದು ವಿವಿಧ ಕಾನೂನುಗಳಿವೆ. ನಮ್ಮ ರಕ್ಷಣೆಗೆ? ಯಾವ ಸರ್ಕಾರವೂ ಈ ಬಗ್ಗೆ ಯೋಚಿಸಿಲ್ಲವೆಂಬ ನೋವು ಕಾಡುತ್ತಿದೆ. ತೈಲ ಮಾಫಿಯಾ ಒಂದೇ ಅಲ್ಲ, ದೋಶದ್ರೋಹಿ ಶಕ್ತಿಗಳ ಬಗ್ಗೆ ವರದಿ ಮಾಡುವಾಗಲೆಲ್ಲ ನಾವು ನಮ್ಮ ಜೀವದ ಆಸೆಯನ್ನು ಬಿಟ್ಟಿರುತ್ತೇವೆ. ಹಾಗಂತ ನಮಗೆ ಜೀವನದ ಬಗ್ಗೆ ಕಾಳಜಿ, ಆಸೆ, ಆಕಾಂಕ್ಷೆಗಳು ಇರುವುದೇ ಇಲ್ಲ ಅಂತ ಅರ್ಥವಲ್ಲ. ಇಂತಿರುವಾಗ ನಮ್ಮ ಭದ್ರತೆ, ರಕ್ಷಣೆಯ ಬಗ್ಗೆಯೂ ಯಾರಾದರೂ ಸ್ವಲ್ಪ ಕಾಳಜಿ ತೋರಿಸಿದರೆ ಸಂತಸವಾಗುವುದು ಖಂಡಿತ.

ಅಂದಹಾಗೆ, ಇಂದು ನಮ್ಮದೇ ದಿನ. ಅಂದರೆ ಪತ್ರಿಕಾ ದಿನ. ಹಾಗೆಂದು ಈ ದಿನವನ್ನು ಒಂದು ಹಬ್ಬದಂತೆ ಸಂತಸದಿಂದ ಆಚರಿಸುವ ಮನಸ್ಥಿತಿಯಲ್ಲಿ ಯಾವ ಪತ್ರಕರ್ತನೂ ಇಲ್ಲ. ಆತನ ಜೀವನದ ರಥವೂ ಅಭದ್ರತೆಯೊಂದಿಗೇ ಮುಂದುವರಿದಿದೆ- ಸಮಯದ ಪರಿವೆಯಿಲ್ಲದೆ, ಜೀವದ ಹಂಗಿಲ್ಲದೆ. ಇದು ಬದಲಾದೀತೇ?

Comments

Popular posts from this blog

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?