ಹ್ಯಾಕರ್ಸ್, ಉಗ್ರರ ಮಧ್ಯೆ ಉದಾಸ 'ಶಾಂತಿದೂತ'!

ಅದ್ಯಾಕೋ 1962ರಲ್ಲಿ ನಮ್ಮ ಸರ್ಕಾರ ಮಾಡಿದಂಥ ಮೂರ್ಖತನ ಮತ್ತೆ ಮತ್ತೆ ಕಾಡುತ್ತಿದೆ. ಚೀನೀ ಸೈನಿಕರು ಟಿಬೆಟ್ ಗೆ ಬಂದು ಕುಳಿತಿದ್ದಾರೆ, ಸೇನಾ ನೆಲೆಗಳನ್ನು ಸ್ಥಾಪಿಸುತ್ತಿದ್ದಾರೆ, ರಸ್ತೆಗಳು ಮತ್ತಿತರ ಮೂಲಸೌಕರ್ಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾದಾಗಲೂ ಸಹ ಅಂದಿನ ಪ್ರಧಾನಿ ಜವಹರಲಾಲ್ ನೆಹರು ಮತ್ತವರ ಸಚಿವ ಸಂಪುಟದ ಸದಸ್ಯರು, ಮಿಲಿಟರಿ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಲೇ ಬಂದಿದ್ದರು. ಏಕಾಏಕಿ ಚೀನಾ ದಾಳಿಯಿಟ್ಟಾಗ ನೆಹರು ಹೇಳಿಕೆಗಳನ್ನು ನಂಬಿದ್ದ ದೇಶದ ಜನತೆ ತಲ್ಲಣಗೊಂಡಿದ್ದರು. ಆ ಯುದ್ಧದಲ್ಲಿ ಹೀನಾಯ ಸೋಲನುಭವಿಸಬೇಕಾಗಿ ಬಂದದ್ದು, ನಮ್ಮ ಅನೇಕ ಸೈನಿಕರು ಚೀನೀಯರಿಗೆ ಸೆರೆ ಸಿಕ್ಕಬೇಕಾಗಿ ಬಂದದ್ದು ಎಲ್ಲ ಘಟನೆಗಳೂ ಈಗಲೂ ಕಣ್ಣಮುಂದೆಯೇ ನಡೆಯುತ್ತಿರುವಂತೆ ಧುತ್ತನೆ ಪ್ರತ್ಯಕ್ಷವಾಗುತ್ತವೆ. 'ಹಿಂದಿ, ಚೀನೀ ಭಾಯಿ ಭಾಯಿ' ಎಂದು ಹೇಳುತ್ತಾ ಬಗಲಲ್ಲೇ ನಿಂತುಕೊಂಡು ಗುಂಡಿನ ಮಳೆಗರೆದ ಚೀನಾವನ್ನು ಓಲೈಸುವುದಕ್ಕೆ ನಮ್ಮ ನಾಯಕರು ಈಗಲೂ ಪ್ರಯತ್ನ ಪಡುತ್ತಿದ್ದಾರೆ.

ಚಿತ್ರ: ಸಂತೋಷ್ ಸಸಿಹಿತ್ಲು

ಬ್ರಿಟಿಷರು ಬಿತ್ತಿದಂತಹ ಸೇಡಿನ ಬೀಜವನ್ನು ಹೆಮ್ಮರವಾಗಿ ಬೆಳೆಸಿಕೊಂಡಿರುವಂಥ ಪಾಕಿಸ್ತಾನದ್ದೂ ಇದೇ ಕಥೆ. ತನ್ನ ಸೈನಿಕರನ್ನು, ಐಎಸ್ ಐ ಏಜೆಂಟರನ್ನು ಭಾರತದೊಳಕ್ಕೆ ನುಗ್ಗಿಸಿ ಅವಾಂತರ ಸೃಷ್ಟಿಸುತ್ತಿರುವ ಪಾಕಿಸ್ತಾನದ ಬಗ್ಗೆ ನಾವು ತಳೆದಿರುವ ಮೃದು ಭಾವ ಎದೆಯಾಳಕ್ಕೆ ಭರ್ಜಿಯಿಂದ ಚುಚ್ಚಿ ಗಾಯ ಮಾಡಿದೆ. ಉಗ್ರರನ್ನು ಮುಂದಿಟ್ಟು ಸೃಷ್ಟಿಸುವ ಭೀತಿಗಳಂತೂ ಗಾಯದ ಮೇಲೆ ಖಾರದ ಪುಡಿ ಎರಚಿದಂಥೆ ಭಾಸವಾಗುತ್ತಿದೆ. ಕೈಗೆ ಸಿಕ್ಕಿದ ಉಗ್ರರನ್ನೇ ಸಾಕುತ್ತಿರುವಂಥ 'ವಿಶಾಲ ಹೃದಯದವರು' ನಾವು. ಹೀಗಿರುವಾಗ ನಮ್ಮ ಸುತ್ತಲೇ ವಿವಿಧ ರೀತಿಯ ಅಪಾಯಗಳು ಮುತ್ತಿಕೊಂಡು ಕಾಟ ಕೊಟ್ಟರೆ ಗೊತ್ತಾಗುವುದಾದರೂ ಹೇಗೆ? ಅಷ್ಟಕ್ಕೂ ಈಗ ಯಾರಾದರೂ ಯುದ್ಧ ಸನ್ನದ್ಧರಾಗುತ್ತಿದ್ದಾರೆಯೇ? ಎಂಬ ಪ್ರಶ್ನೆ ಮೂಡಬಹುದು.


ಹೌದು, ಯುದ್ಧಸಿದ್ಧತೆಗಳು ನಡೆಯುತ್ತಿವೆ. ಯುದ್ಧ ಶುರುವಾಗಿದೆ ಅಂತಲೇ ಹೇಳಬಹುದು. ಇಲ್ಲಿ ಫಿರಂಗಿಗಳು ಸಿಡಿಯುವುದಿಲ್ಲ, ಯುದ್ಧಟ್ಯಾಂಕರ್ ಗಳು ಗರ್ಜಿಸುವುದಿಲ್ಲ. ಸೈನಿಕರು ಕಾದಾಡುವುದಿಲ್ಲ. ಸಾವು ನೋವು ಸಂಭವಿಸುವುದೇ ಇಲ್ಲ. ಯುದ್ಧವಿಮಾನಗಳಂತೂ ಹಾರಾಡುವುದೇ ಇಲ್ಲ. ಇದು ಒಂಥರಾ 'ಗುಪ್ತಕಾಳಗ'- ಸೈಬರ್ ವಾರ್! ವೈರಿ ದೇಶಗಳ ರಹಸ್ಯ ದಾಖಲೆಗಳನ್ನು, ಮಿಲಿಟರಿ ವಿವರಗಳನ್ನು ಆ ದೇಶದ ಅಂತರ್ಜಾಲ ತಾಣದಿಂದ ಕದ್ದು, ಅದನ್ನು ಹಾಳುಗೆಡವುವುದು ಈ ಸೈಬರ್ ವಾರ್ ನ ತಂತ್ರ. ವೈರಿ ದೇಶದ ಮಿಲಿಟರಿ ದಾಖಲೆಗಳು ಸಿಕ್ಕವು ಎಂದಾದಲ್ಲಿ ಆ ದೇಶದ ಮಿಲಿಟರಿ ಶಕ್ತಿ ಸಂಪೂರ್ಣ ನಾಶವಾಯಿತು ಎಂದೇ ಅರ್ಥ. ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಕಂಪ್ಯೂಟರ್ ನಿಯಂತ್ರಣ ಹೊಂದಿದ್ದು, ಸಾಫ್ಟ್ ವೇರ್ ನಿರ್ದೇಶನದಂತೆ ದಾಳಿ ಮಾಡುತ್ತದೆ. ಈ ಸಾಫ್ಟ್ ವೇರನ್ನೇ ಹಾಳು ಮಾಡಿಬಿಟ್ಟರೆ? ವೈರಸ್ ಸೋಂಕು ತಗುಲಿ ಸಾಫ್ಟ್ ವೇರ್ ಕರಪ್ಟ್ ಆಯಿತು ಎಂದಾದರೆ ಅದರಿಂದ ನಿಯಂತ್ರಿಸಲ್ಪಡುವ ಕ್ಷಿಪಣಿ, ಶಸ್ತ್ರಾಸ್ತ್ರಗಳು ಕಾರ್ಯನಿರ್ವಹಿಸುವುದಿಲ್ಲ. ಇಂಥದ್ದೊಂದು ಯುದ್ಧದ ರಣರಂಗ ಈಗಾಗಲೇ ಸಿದ್ಧವಾಗಿದೆ. ಸಣ್ಣದಾಗಿ ಯುದ್ಧವೂ ಶುರುವಾಗಿದೆ.

ವಾರದ ಹಿಂದೆ ಅಮೆರಿಕದ ಬರಾಕ್ ಒಬಾಮ ಸರ್ಕಾರ ಚೀನಾಕ್ಕೆ ಒಂದು ಎಚ್ಚರಿಕೆ ನೀಡಿತ್ತು- 'If you shut down our power grid, maybe we will put a missile down one of your smokestacks' ಎಂದು. ಅಧ್ಯಕ್ಷ ಬರಾಕ್ ಒಬಾಮ ಕೂಡಾ ಸೈಬರ್ ದಾಳಿಗಳನ್ನು ಚೀನಾ ಸರ್ಕಾರವೇ ಪ್ರಾಯೋಜಿಸುತ್ತಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದರು. ಅಲ್ಲದೆ ಚೀನೀ ಹ್ಯಾಕರ್ ಗಳ ಬಗ್ಗೆ ಎಚ್ಚರದಿಂದಿರುವಂತೆ ಹೇಳಿದ್ದರು. ಇದಾದ ಮರುದಿನವೇ ಚೀನೀ ಹ್ಯಾಕರ್ ಗಳು ಅಮೆರಿಕದ ರಕ್ಷಣಾ ಇಲಾಖೆಯ ಹಲವಾರು ಅಧಿಕಾರಿಗಳ ನೂರಾರು ಇ-ಮೇಲ್ ಗಳನ್ನು ಹ್ಯಾಕ್ ಮಾಡಿದ್ದು, ಸಾವಿರಾರು ದಾಖಲೆಗಳನ್ನು ಕದ್ದಿದ್ದಾರೆ. ಅದರಲ್ಲಿ ಹಲವು ದಾಖಲೆಗಳು ಮಿಲಿಟರಿಯ ರಹಸ್ಯ ವಿಚಾರಗಳನ್ನು ಒಳಗೊಂಡಿವೆ ಎಂದೂ ಹೇಳಲಾಗಿದೆ.

ಇಂಥದ್ದೇ ಆಘಾತಕಾರಿ ಪರಿಸ್ಥಿತಿ ಭಾರತಕ್ಕೆ ವರ್ಷದ ಹಿಂದೆ ಎದುರಾಗಿತ್ತು. ಪಾಕಿಸ್ತಾನದ ಐಎಸ್ ಐ ನಮ್ಮ ದಾಖಲೆಗಳನ್ನು ಕದ್ದಿತ್ತು. ಅಲ್ಲಿಂದ ನಂತರ ಪದೇ ಪದೇ ಭಾರತದ ಹಲವಾರು ರಹಸ್ಯ ದಾಖಲೆಗಳನ್ನು ಹ್ಯಾಕರ್ ಗಳು ಕಳವು ಮಾಡುತ್ತಿದ್ದಾರೆ. ಮಿಲಿಟರಿ ದಾಖಲೆಗಳಂತೂ ಆಗಾಗ್ಗೆ ಹ್ಯಾಕರ್ ಗಳ ವಶವಾಗುತ್ತಿವೆ. ಇದು ಈಗಿನ ಯುದ್ಧ ಸನ್ನಿವೇಶ. ಪ್ರತಿಯೊಂದು ದೇಶವೂ ಅಂತರ್ಜಾಲ ತಾಣಗಳಲ್ಲಿರುವ ತಮ್ಮ ರಹಸ್ಯ ದಾಖಲೆಗಳ ಬಗ್ಗೆ ಆತಂಕಗೊಂಡಿರುವಂತಹ ಕ್ಷಣಗಳು!

2ನೇ ಮಹಾಯುದ್ಧ ಮುಗಿದ ಬಳಿಕ ಜಗತ್ತಿನಲ್ಲಿ ಶಕ್ತಿಯುತವಾದ ರಾಷ್ಟ್ರ ಯಾವುದು ಎಂಬ ಪೈಪೋಟಿ ಹುಟ್ಟಿತ್ತು. ಒಂದೆಡೆ ಸಂಯುಕ್ತ ಸೋವಿಯಟ್ ರಾಷ್ಟ್ರಗಳ ಒಕ್ಕೂಟ (ಯುಎಸ್ಸೆಸ್ಸಾರ್) ಪ್ರಬಲವಾಗಿ ಬೆಳೆಯತೊಡಗಿತ್ತು. ಜೊತೆಗೇ ದಾಪುಗಾಲು ಹಾಕುತ್ತಿತ್ತು ಅಮೆರಿಕ. ಅಗ ಶುರುವಾದದ್ದು ಶೀತಲ ಕದನ. '3ನೇ ಮಹಾಯುದ್ಧ ಈಗ ಸಂಭವಿಸುತ್ತದೆ' ಎಂಬ ಆತಂಕದಲ್ಲೇ ದಿನ ಕಳೆಯುತ್ತಿರಬೇಕಾದರೆ ಯುಎಸ್ಸೆಸ್ಸಾರ್ ಒಡೆದು ಹೋಗಿ ಹಲವು ಚೂರುಗಳಾದವು. ಯುಎಸ್ಸೆಸ್ಸಾರ್ ಎಂಬ ಶಕ್ತಿ ಅಲ್ಲಿಗೆ ಅವಸಾನಗೊಂಡಿತ್ತು. ಅಮೆರಿಕ ಏಕಮಾತ್ರ ಶಕ್ತಿಯಾಗಿ ಮೆರೆಯುತ್ತಿದ್ದಾಗಲೇ ಅದಕ್ಕೆ ಪೈಪೋಟಿ ನೀಡುವ ಸವಾಲನ್ನು ಹೆಗಲ ಮೇಲೆ ಹೊತ್ತದ್ದು ಚೀನಾ. ಅಮೆರಿಕದೊಂದಿಗೆ ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ನೀಡುತ್ತಲೇ ಬಂದ ಚೀನಾ ಅದರ ಜೊತೆಗೆ ಕಳೆದೊಂದು ದಶಕದಿಂದ ರಹಸ್ಯ ಯುದ್ಧವನ್ನು ಮಾಡುತ್ತಿದೆ. 'ತನಗಿಂತ ಮಿಗಿಲಾದವರು ಯಾರೂ ಇಲ್ಲ' ಎಂದು ಬೀಗುತ್ತಿದ್ದ ಅಮೆರಿಕದ ಮಿಲಿಟರಿ ದಾಖಲೆಗಳನ್ನೇ ಅದು ಕದ್ದಿದೆ ಎಂದಾದರೆ 'ಸದಾ ಅಮಾಯಕತೆಯನ್ನು ಪ್ರದರ್ಶಿಸುವ, ನಮ್ಮ ಮೇಲೆ ವೈರಿಗಳು ಯುದ್ಧ ಸಾರಿದರೂ ನಾವು ಹೋರಾಡುವುದಿಲ್ಲ ಎಂದು ಕೈಕಟ್ಟಿ ಕೂರುವ, ನಮ್ಮಂಥ ಶಾಂತಿಪ್ರಿಯರ ಮೇಲೆ ಯಾರಾದರೂ ಯುದ್ಧ ಮಾಡುತ್ತಾರೆಯೇ ಎಂಬ ಉದಾಸೀನ ಭಾವವನ್ನು ಹೊಂದಿರುವ' ಭಾರತವನ್ನು ಸುಮ್ಮನೆ ಬಿಟ್ಟೀತೇ?

ಬ್ರಿಟನ್ ನ ರಕ್ಷಣಾ ಸಚಿವ ನಿಕ್ ಹಾರ್ವೇ 'action in cyberspace will form part of the future battlefield' ಎಂದು ಹೇಳಿದ್ದರು. ಅದು ನಿಜವಾಗುತ್ತಿದೆ. ಈ ಯುದ್ಧದ ನೇತೃತ್ವವನ್ನು ಚೀನಾ ವಹಿಸಿಕೊಂಡಿದೆ. ಅದಕ್ಕೆ ಪಾಕಿಸ್ತಾನದ ಬೆಂಬಲವೂ ಇದೆ. ಬಹುಶಃ 'ಮೂರನೇ ವಿಶ್ವಯುದ್ಧ' ಎಂಬುದು ನಡೆದರೆ ಅದು ಖಂಡಿತಕ್ಕೂ 'ಸೈಬರ್ ವಾರ್' ಆಗಿರುತ್ತದೆ. ಚೀನಾಕ್ಕೆ ಪಾಕಿಸ್ತಾನ ಬೆಂಬಲ ಕೊಡುತ್ತಿದೆ ಎಂಬುದಕ್ಕೆ ಆ ಎರಡು ದೇಶಗಳ ನಡುವೆ ಇತ್ತೀಚೆಗೆ ವೃದ್ಧಿಯಾಗುತ್ತಿರುವ ಬಾಂಧವ್ಯವೇ ಸಾಕ್ಷಿ. ಅದೂ ಅಲ್ಲದೆ, ಚೀನೀ ಹ್ಯಾಕರ್ ಗಳು ಆಗಾಗ್ಗೆ ಭಾರತದ ದಾಖಲೆಗಳನ್ನು, ಸರ್ಕಾರಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣಗಳ ಪಾಸ್ ವರ್ಡ್ ಗಳನ್ನು ಕದಿಯುತ್ತಲೇ ಇದ್ದಾರೆ. ಕಳೆದ ವರ್ಷದ ಏಪ್ರಿಲ್ ಸಮಯದಲ್ಲಿ ಭಾರತೀಯ ಮಿಲಿಟರಿ ಹಲವಾರು ರಹಸ್ಯ ದಾಖಲೆಗಳು ಕಳವಾದದ್ದನ್ನು ನೆನಪಿಸಿಕೊಳ್ಳಿ. ಇದರ ಹಿಂದೆ ಪಾಕ್ ಗುಪ್ತಚರ ಸಂಸ್ಥೆ ಐಎಸ್ ಐ ಕೈವಾಡ ಇತ್ತು.

ಅಮೆರಿಕದ ಮಿಲಿಟರಿ ದಾಖಲೆಗಳನ್ನು ಈಗ ಚೀನೀ ಹ್ಯಾಕರ್ ಗಳು ಕದ್ದಿರುವುದು ಖಂಡಿತ ಎಂಬ ಮಾತುಗಳು ಕೇಳಿಬರುತ್ತಿವೆ. ಚೀನೀ ಹ್ಯಾಕರ್ ಗಳಿಗೆ ಅಲ್ಲಿನ ಸರ್ಕಾರದ ಪ್ರಾಯೋಜಕತ್ವ ಇರುವುದು ಖಂಡಿತ. ಚೀನಾ ಸರ್ಕಾರ ಈ ಆರೋಪವನ್ನು ತಳ್ಳಿ ಹಾಕಿದೆಯಾದರೂ ಈ ಹಿಂದಿನ ಹಲವು ಸನ್ನಿವೇಶಗಳಲ್ಲಿ ಚೀನಾ ಸರ್ಕಾರ ನಡೆದುಕೊಂಡ ರೀತಿ ಅದರ ಮೇಲೆ ಸಾಸಿವ ಕಾಳಿನಷ್ಟು ನಂಬಿಕೆಯನ್ನೂ ಹುಟ್ಟಿಸುತ್ತಿಲ್ಲ. 1962ರ ಭಾರತ-ಚೀನಾ ಯುದ್ಧಕ್ಕೂ ಮುಂಚಿನ ಸನ್ನಿವೇಶವೇ ಚೀನಾದ ಗುಣ-ನಡತೆಗೆ ಕನ್ನಡಿ ಹಿಡಿದಂತಿರುವಾಗ ಇನ್ನುಳಿದ ದಾಖಲೆಗಳು ಯಾಕೆ ಬೇಕು? ಆಗಲೂ ಅಷ್ಟೆ 'ನಾವು ಯುದ್ಧ ಮಾಡುವುದಿಲ್ಲ. ಸೈನಿಕರ ಜಮಾವಣೆ ಯುದ್ಧ ಸನ್ನಿವೇಶದ ಸೃಷ್ಟಿಯಲ್ಲ. ಅದರಲ್ಲೂ ಭಾರತದೊಂದಿಗೆ ನಾವು ಯುದ್ಧ ಮಾಡುವುದೇ ಇಲ್ಲ' ಎಂದೆಲ್ಲ ಹೇಳಿದ ಚೀನಾ, ಹಲವಾರು ಬಾರಿ ಭಾರತಕ್ಕೆ ಭೇಟಿಯನ್ನೂ ಕೊಟ್ಟು ಬಳಿಕ ಒಮ್ಮಿಂದೊಮ್ಮೆಲೇ ಯುದ್ಧ ಸಾರಿತು. ಚೀನಾದ ಬಣ್ಣದ ಮಾತುಗಳನ್ನು ನಮ್ಮ ಅಂದಿನ ಪ್ರಧಾನಿ ನೆಹರು ಮತ್ತವರ ತಂಡ ಕೇಳಿ ಮರುಳಾಗದೇ ಇರುತ್ತಿದ್ದರೆ ಆ ಯುದ್ಧ ನಡೆಯುತ್ತಲೇ ಇರಲಿಲ್ಲವೇನೋ? ಇರಲಿ, ಆಗಿನ ಸಾಧ್ಯತೆಗಳು ಈಗೇಕೆ?

ಒಂದೆಡೆ ಉಗ್ರರನ್ನು ಛೂಬಿಟ್ಟು ತೆರೆ ಮರೆಯಲ್ಲಿ ಯುದ್ಧ ಮಾಡುತ್ತಿರುವ ಪಾಕಿಸ್ತಾನವಿದೆ, ಮತ್ತೊಂದು ಕಡೆಯಿಂದ ಹ್ಯಾಕರ್ ಗಳನ್ನು ಬಳಸಿಕೊಂಡು ಮಿಲಿಟರಿಯ ರಹಸ್ಯ ದಾಖಲೆಗಳನ್ನು ಕದಿಯುವ, ಅವುಗಳನ್ನು ಹಾಳುಗೆಡಹುವ ಚೀನಾವಿದೆ, ಮತ್ತೊಂದು ಕಡೆಯಿಂದ ನಮ್ಮಿಂದಲೇ ಸ್ವಾತಂತ್ರ್ಯ ಪಡೆದರೂ ಅದಕ್ಕೆ ಎಳ್ಳಷ್ಟೂ ಕೃತಜ್ಞತೆಯಿಲ್ಲದೆ, ಭಾರತದೊಳಕ್ಕೆ ಉಗ್ರರು ನುಸುಳಲು ತನ್ನ ನೆಲವನ್ನೇ ಕೊಡುತ್ತಿರುವ ಬಾಂಗ್ಲಾದೇಶವಿದೆ. ಅರ್ಥಾತ್ ಭಾರತವೆಂಬೋ ಈ ಉಪಖಂಡದ ಮೂರು ದಿಕ್ಕುಗಳಲ್ಲಿ ನೀರು ಆವರಿಸಿಕೊಂಡಿದ್ದರೆ ಮತ್ತೆ ಮೂರು ದಿಕ್ಕುಗಳಲ್ಲಿ ವೈರಿಗಳು ಹೊಂಚು ಹಾಕಿ ಕುಳಿತಿದ್ದಾರೆ. ಹಾಗಂತ ಭಾರತದ ನಾಯಕರ ಮನಸ್ಥಿತಿಯೇನೂ ಬದಲಾಗಿಲ್ಲ. ಅದರಲ್ಲೂ ಮಾಹಿತಿ ತಂತ್ರಜ್ಞಾನ ಮುಕುಟಪ್ರಾಯವೆನ್ನಿಸಿಕೊಂಡಿರೋ ಭಾರತದಲ್ಲೇ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸುರಕ್ಷತೆ ಇಲ್ಲ ಎಂದಾದರೆ ಇದಕ್ಕೆ ಏನೆನ್ನೋಣ? ಉದಾಸೀನತೆಯಿಂದ ಕೈಕಟ್ಟಿ ಕುಳಿತಂತಹ, ವೈರಿಗಳನ್ನು ನಿರ್ಲಕ್ಷಿಸಿದಂತಹ ಹಳೆಯ ವಿಚಾರಗಳನ್ನು ಮರೆತುಬಿಡೋಣ, ತೊಂದರೆಯಿಲ್ಲ. ಹಾಗಂತ ಹೊಸದಾಗಿ ಉದ್ಭವವಾಗಿರುವ 'ಯುದ್ಧ'ವನ್ನು ಕಡೆಗಣಿಸಿದರೆ ಹೇಗಾದೀತು?

ಭಾರತದ ಹೊರಗೂ ವೈರಿಗಳು, ಒಳಗಡೆಯೂ ವೈರಿಗಳು, ಜೈಲಿನಲ್ಲಿಯೂ ವೈರಿಗಳು... ಎಂಬಂತಹ ಸ್ಥಿತಿ ಈಗಿದೆ. ಸೈಬರ್ ವಾರ್ ಬಗ್ಗೆ ಅಮೆರಿಕ ಮತ್ತು ಇಂಗ್ಲೆಂಡ್ ದೇಶಗಳು ಆಗಾಗ್ಗೆ ಎಚ್ಚರಿಕೆಯ ನಡೆಗಳನ್ನು, ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದ್ದಾರೆ. ನಾವು ಮಾತ್ರ ನಿರ್ಲಕ್ಷಿಸುತ್ತಾ ಬಂದಿದ್ದೇವೆ. ಹೇಳಿ ಕೇಳಿ ಇದು ಮಾಹಿತಿ ತಂತ್ರಜ್ಞಾನದ ಯುಗ. ಎಲ್ಲ ದಾಖಲೆಗಳೂ ಸಂಗ್ರಹವಾಗಿರುವುದು ಅಂತರ್ಜಾಲದಲ್ಲಿ, ಕ್ಷಿಪಣಿಗಳು, ಶಸ್ತ್ರಾಸ್ತ್ರಗಳು ಕಾರ್ಯನಿರ್ವಹಿಸುವುದು ಸಾಫ್ಟ್ ವೇರ್ ಮೂಲಕ.

ಇದನ್ನೇ ಹಾಳುಗೆಡವಿ ಅರಾಜಕತೆ ಸೃಷ್ಟಿಸುವ ಚೀನಾ ಮತ್ತು ಪಾಕಿಸ್ತಾನದ ಮುಂದೆ ನಾವು 'ಶಾಂತಿ ಸಂಧಾನ', 'ಬಾಂಧವ್ಯ ವೃದ್ಧಿ', 'ದ್ವಿಪಕ್ಷೀಯ ವ್ಯವಹಾರ ವೃದ್ಧಿ' ಎಂದು ಪದೇ ಪದೇ ತಲೆಬಾಗುತ್ತಲೇ ಇದ್ದೇವೆ. 'ವೈರಿಗಳ ಬಗ್ಗೆ ಉದಾಸೀನ, ನಿರ್ಲಕ್ಷ್ಯ' ಎಂಬುದು ಭಾರತೀಯರ ರಕ್ತದಲ್ಲಿಯೇ ಹರಿದು ಬಂದಿದೆಯೇನೋ? ಇತಿಹಾಸ ಮರುಕಳಿಸುತ್ತದೆಯಂತೆ. ವೈರಿಗಳ ಬಗ್ಗೆ ಉದಾಸೀನ, ನಿರ್ಲಕ್ಷ್ಯದ ವಿಚಾರದಲ್ಲಿಯೂ ಇತಿಹಾಸ ಮರುಕಳಿಸದಿದ್ದರೆ ಸಾಕು!

ಆದರೂ ನಮ್ಮ ಉದಾಸ ನಾಯಕರ ಮನಸ್ಥಿತಿಯ ಬಗ್ಗೆ ಆತಂಕವಿದೆ!

Comments

  1. Nimma blog ge nanna blog http://apoorvamagic.blogspot.com nallondu kindi ittiddene :)

    ReplyDelete

Post a Comment

Popular posts from this blog

ಮುತ್ತಿಗೆ ನಮಗೂ ಬೇಕೆ?: ಮುಂಬೈಗೆ ಬಂತು 'ಆಕ್ಯುಪೈ ವಾಲ್ ಸ್ಟ್ರೀಟ್' ಪ್ರತಿಭಟನೆ

ಉದ್ದೀಪನದ ಸುಳಿಯಲ್ಲಿ ಬೀಳುವುದು ಹೀಗೆ...

ಬದಲಾಗುತ್ತಿದೆ ಕೆಎಎಸ್ ಪಠ್ಯ- ಎದುರಿಸೋದಕ್ಕೆ ನೀವೆಷ್ಟು ಸಿದ್ಧ?