ಈ 'ಹೋರಾಟ'ದ ಯಾನ ನಮಗೆಂದು ಸಾಧ್ಯ?
Endeavour- ಅಂದರೆ ಹೋರಾಟ, ಪ್ರಯತ್ನ. ಬಾಹ್ಯಾಕಾಶದಲ್ಲಿ ಮಾನವ ಕಾಲಿಟ್ಟು, ಅಲ್ಲಿಂದ ವಿಸ್ಮಯಗಳ ಆಗರವನ್ನೇ ಬಗೆದು ನೋಡುವಂಥ ಕಲ್ಪನೆಯನ್ನು ಸಾಕಾರಗೊಳಿಸಿಕೊಳ್ಳುವ ಕನಸು ಕಂಡಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಪಾಲಿಗೆ ಅದು ನಿಜವಾದ 'ಹೋರಾಟ'ವೇ ಸರಿ. ಬಾಹ್ಯಾಕಾಶದಲ್ಲೊಂದು ನಿಲ್ದಾಣ ಸ್ಥಾಪನೆ ಮಾಡಬೇಕು, ಆ ನಿಲ್ದಾಣವನ್ನು ಅಭಿವೃದ್ಧಿಗೊಳಿಸಬೇಕು, ಬಾಹ್ಯಾಕಾಶ ಯಾತ್ರೆ ಹೊರಟಂಥ ಮಾನವ ಭೂಮಿಯಿಂದ ಒಮ್ಮಿಂದೊಮ್ಮೆಗೇ ತಲುಪಲು ಸಾಧ್ಯವಾಗದಂತಹ ಸ್ಥಳಗಳನ್ನು ತಲುಪುವುದಕ್ಕೆ ಈ ನಿಲ್ದಾಣ ನೆರವಾಗಬೇಕು, ಒಂದೊಮ್ಮೆ ಅನಿವಾರ್ಯವಾಗಿ ಗಗನನೌಕೆಗೆ ಸ್ವಲ್ಪ ವಿಶ್ರಾಂತಿ ಕೊಡಬೇಕೆಂಬ ಪರಿಸ್ಥಿತಿ ಬಂದರೂ ಇಳಿದುಕೊಳ್ಳುವುದಕ್ಕೊಂದು ನೆಲೆಯಿರಬೇಕು. ಈ ಎಲ್ಲ ಕನಸುಗಳನ್ನು ನನಸಾಗಿಸುವ ಹೋರಾಟಕ್ಕೆ ಅಣಿಯಾದಂತಹ ನಾಸಾ ಅದನ್ನು ಸಾಧಿಸಿ ತೋರಿಸಿತು. ಈ ಬಾಹ್ಯಾಕಾಶ ನಿಲ್ದಾಣವನ್ನು ಕಟ್ಟುವುದೇ ಒಂದು ಹೋರಾಟವಾಗಿತ್ತು. ಅಂಥ ಹೋರಾಟ ಯಶಸ್ವಿಯಾಗಬೇಕು ಎಂದಾದರೆ ಭೂಮಿ ಮತ್ತು ಬಾಹ್ಯಾಕಾಶದ ನಡುವಿನ ನಂಟು ಗಟ್ಟಿಯಾಗಿರಬೇಕು. ಆ ಬಂಧಕ್ಕೆ ತಡೆಯಿರಕೂಡದು. ಅಂಥದ್ದೊಂದು ಬಂಧವನ್ನು ಬೆಸುಗೆ ಹಾಕಿದ್ದು ನಾಸಾದ ಗಗನನೌಕೆ Endeavour.
ಇಷ್ಟೆಲ್ಲ ಮನಃಪಟಲದಲ್ಲಿ ಹಾದು ಹೋದದ್ದು ಮೊನ್ನೆ ಜೂನ್ 1ರಂದು ಈ ಎಂಡೆವರ್ ತನ್ನ ಅಭಿಯಾನವನ್ನು ಕೊನೆಗೊಳಿಸಿದಾಗ! ಬಾಹ್ಯಾಕಾಶ ಕ್ಷೇತ್ರದಲ್ಲಿ ವಿವಿಧ ಸಾಧನೆಗಳನ್ನು ಮಾಡುವ ಕನಸು ಕಟ್ಟುತ್ತಿರುವ ಹಲವಾರು ಮನಸ್ಸುಗಳು ಭಾರತದಲ್ಲೂ ಇವೆ. ಅಂತಹ ಸಾಧನೆ ಮಾಡುವ ಸಾಮರ್ಥ್ಯವೂ ಇದೆ. ಆದರೆ ಇಚ್ಛಾಶಕ್ತಿಯ ಕೊರತೆ, ಭ್ರಷ್ಟಾಚಾರ ಭಾರತವನ್ನು ಕಟ್ಟಿ ಹಾಕಿದೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಕಟ್ಟುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದೇ ಈ ಎಂಡೆವರ್. ಅದು ಒಂದೆರಡು ದಿನದ ಕೆಲಸವಲ್ಲ. ಗಗನಯಾತ್ರಿಗಳನ್ನು ಹೊತ್ತು ಸುರಕ್ಷಿತವಾಗಿ ಐಎಸ್ಎಸ್ ಕಕ್ಷೆಯನ್ನು ತಲುಪಿ, ಅಲ್ಲಿ ಕಾರ್ಯಗಳನ್ನು ಯಶಸ್ವಿಯಾಗಿ ಪೂರೈಸಿ ಮತ್ತೆ ಭೂಮಿಗೆ ಸುರಕ್ಷಿತವಾಗಿ ಬಂದು ತಲುಪುವುದೆಂದರೆ ಮೃತ್ಯುವಿನ ಉದರದೊಳು ಹೊಕ್ಕು ಸಜೀವ ಹಿಂತಿರುಗಿದಂತೆ! ಬಾಹ್ಯಾಕಾಶ ನಿಲ್ದಾಣವನ್ನು ಒಂದೇ ಸುತ್ತಿನ ಯಾನದಲ್ಲಿ ಪೂರ್ಣಗೊಳಿಸುವುದಕ್ಕೂ ಸಾಧ್ಯವಿಲ್ಲ. ಇದುವರೆಗೆ ಕೈಗೊಂಡಿರುವ ಗರಿಷ್ಠ ದಿನಗಳ ಬಾಹ್ಯಾಕಾಶ ಯಾತ್ರೆ ಎಂದರೆ 17 ದಿನಗಳದ್ದು. ಇಂತಹ ಹಲವು ಯಾತ್ರೆಯನ್ನು ಕೈಗೊಂಡು ಬಾಹ್ಯಾಕಾಶ ನಿಲ್ದಾಣವನ್ನು ಪರಿಕಲ್ಪನೆಗೆ ಪ್ರಮಾದವಾಗದಂತೆ ನಿರ್ಮಿಸಲು ಸಹಕರಿಸುವುದು ಬಾಯಿಮಾತಿನಲ್ಲಿ ಹೇಳಿಕೊಂಡಷ್ಟು ಸುಲಭವಲ್ಲ. ಯಾತ್ರೆಯ ನಡುವೆ ಅರೆಕ್ಷಣದ ಮೈಮರೆವು ಬಂದರೂ ಯಮಪುರಿ ಸೇರಿದಂತೆ! ಗಗನನೌಕೆಯಲ್ಲಿ ಕೂದಲೆಳೆಯ ದೋಷ ಕಂಡು ಬಂದರೂ ಎಂತಹ ಆಘಾತವಾಗುತ್ತದೆ ಎಂಬುದಕ್ಕೆ ಭಾರತೀಯ ಮೂಲದ ಗಗನಯಾನಿ ಕಲ್ಪನಾ ಚಾವ್ಲಾ ಸಹಿತ 7 ಗಗನಯಾತ್ರಿಗಳನ್ನು ಬಲಿತೆಗೆದುಕೊಂಡ ಕೊಲಂಬಿಯಾ ಗಗನನೌಕೆಯೇ ಸಾಕ್ಷಿ.
ಇಂತಿರುವಾಗ ಪ್ರತಿಯೊಂದು ಯಾನದಲ್ಲಿಯೂ ಸುರಕ್ಷತೆಯನ್ನು ಕಾಯ್ದುಕೊಂಡು, ತನಗೊಪ್ಪಿಸಿದ ಕೆಲಸವನ್ನು ನಿರೀಕ್ಷೆಗೂ ಮೀರಿದಂತೆ ಮಾಡಿ ಮುಗಿಸಿದ ಎಂಡೆವರ್ ಗೆ ಹ್ಯಾಟ್ಸಪ್ ಹೇಳಲೇಬೇಕು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ವಲ್ಪ ಸ್ವಲ್ಪವೇ ಕಟ್ಟುತ್ತಾ, ಅದರ ದುರಸ್ತಿ ಕೆಲಸಗಳನ್ನು ಮಾಡುತ್ತ ಆಗಾಗ್ಗೆ ಕೆಲವೊಂದು ದಿನಗಳ ಬಾಹ್ಯಾಕಾಶ ಯಾತ್ರೆಯನ್ನು ಕೈಗೊಳ್ಳುತ್ತಿದ್ದ ನಾಸಾದ ವಿಜ್ಞಾನಿಗಳನ್ನು ಕರೆದೊಯ್ಯುವ ಮತ್ತು ಅಗತ್ಯ ಉಪಕರಣಗಳನ್ನು ಹೊತ್ತೊಯ್ಯುವ ಮಹತ್ತರ ಕಾರ್ಯವನ್ನು ಮಾಡಿದ ಎಂಡೆವರ್ ಇದೀಗ ನಿವೃತ್ತಿ ಸ್ವೀಕರಿಸಿದೆ. 18 ವರ್ಷಗಳ ಸೇವಾವಧಿಯನ್ನು ಎಂಡೆವರ್ ಪೂರ್ಣಗೊಳಿಸಿದೆ. 1987ರಲ್ಲಿ ನಿರ್ಮಾಣಗೊಂಡ ಇದು ಮೊದಲ ಬಾರಿ ನಭಕ್ಕೆ ನೆಗೆದದ್ದು 1992ರ ಮೇ 7ರಂದು. ತನ್ನ ಮೊದಲ ಯಾತ್ರೆಯನ್ನು 10 ದಿನಗಳಿಗೆ ಅಂದೆ 1992ರ ಮೇ 16ರಂದು ಮುಕ್ತಾಯಗೊಳಿಸಿತು. ನಂತರ ಎಂಡೆವರ್ ಕೈಗೊಂಡ ಯಾನಗಳು ಹಲವು, ಅದರ ಸಾಧನೆಗಳು ಅಮೋಘ. 2011ರ ಮೇ 16ರಂದು 'ಅಂತಿಮ ಗಗನಯಾತ್ರೆ'ಯನ್ನು ಎಂಡೆವರ್ ಆರಂಭಿಸಿದಾಗ ಎಲ್ಲ
ವಿಜ್ಞಾನಿಗಳ ಮುಖದಲ್ಲಿ ಕಂಡುಬಂದದ್ದ ಈ 'ವೃದ್ಧ ಗಗನನೌಕೆ' ಈ ಬಾರಿ ಕೈಗೂಡುತ್ತದೆಯೇ? ಎಂಬ ಆತಂಕದ ಭಾವ. ನಭಕ್ಕೇನೋ ಯಶಸ್ವಿಯಾಗಿ ನೆಗೆಯಿತು. ಬುವಿಯತ್ತದ ಮರುಪ್ರಯಾಣ? ಅಲ್ಲಿಯೂ ಪ್ರಶ್ನಾರ್ಥಕವೇ! ಆತಂಕಗಳನ್ನು ನಿವಾರಿಸುವಂತೆ ಜೂನ್ 1ರಂದು 17 ದಿನಗಳ ಯಶಸ್ವಿ ಯಾನ ಸಮಾಪ್ತಿಗೊಳಿಸಿ ಕೆನಡಿ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿಳಿದಾಗ ಸಾಫಲ್ಯದ ನಗೆ ಮೂಡಿತ್ತು.
20 ವರ್ಷಗಳ ಬಾಹ್ಯಾಕಾಶ ಯಾನದಲ್ಲಿ ಎಂಡೆವರ್ ಪ್ರಯಾಣಿಸಿದ್ದು 12, 28,83,151 ಮೈಲಿಗಳನ್ನು! ಅಂದರೆ 19,77,61,262 ಕಿಲೋ ಮೀಟರ್ ಗಳು. ಒಟ್ಟು 25 ಯಾನಗಳು. ಇದುವರೆಗೆ 148 ಗಗನಯಾತ್ರಿಗಳನ್ನು ಹೊತ್ತೊಯ್ದಂತಹ ಕೀರ್ತಿ. ಬಾಹ್ಯಾಕಾಶದಲ್ಲಿ 296 ದಿನ, 3 ಗಂಟೆ, 18 ನಿಮಿಷ, 35 ಸೆಕೆಂಡುಗಳನ್ನು ಕಳೆದಂತಹ ಕೀರ್ತಿ. 3 ಉಪಗ್ರಹಗಳನ್ನು ಕೂಡಾ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಹೆಮ್ಮೆ. ನಾಸಾದ ಬಾಹ್ಯಾಕಾಶ ನಿಲ್ದಾಣ ಐಎಸ್ಎಸ್ ಗೆ 12 ಬಾರಿ ಮತ್ತು ರಷ್ಯಾದ ಬಾಹ್ಯಾಕಾಶ ನಿಲ್ದಾಣಕ್ಕೆ 1 ಬಾರಿ ಸೇರಿಕೊಂಡಂತಹ ಶ್ರೇಯಸ್ಸು 'ಎಂಡೆವರ್' ಹೋರಾಟದ ಫಲವೆಂದೇ ಹೇಳಬೇಕು. ತನ್ನ ಹೋರಾಟದ ಹಾದಿಯಲ್ಲಿ ಭೂಮಿಯ ಸುತ್ತ 4,671 ಬಾರಿ ಪ್ರದಕ್ಷಿಣೆ ಹಾಕಿದ ಎಂಡೆವರ್್ಗೆ ಸಾಟಿಯಾದಂಥ ಗಗನನೌಕೆ ಸದ್ಯಕ್ಕೆ ಮತ್ತೊಂದಿಲ್ಲ.
ಜೂನ್ 1ರಂದು ಗಗನಯಾತ್ರೆಯ ಹೋರಾಟಕ್ಕೆ 'ಎಂಡೆವರ್' ಮಂಗಳ ಹಾಡುವಾಗಲೂ ಸಹ 'ತಾನು ಇಂತಹ ಇನ್ನಷ್ಟು ಯಾತ್ರೆಗಳನ್ನು ಕೈಗೊಳ್ಳಲು ಸಮರ್ಥ' ಎಂಬ ಭಾವನೆಯನ್ನೇ ವಿಜ್ಞಾನಿಗಳ ಹೃದಯದಲ್ಲಿ
ಉಕ್ಕಿಸಿತು. 'ಎಂಡೆವರ್' ಇನ್ನೇನು ತನ್ನ ಕೊನೆಯ ಗಗನಯಾತ್ರೆಯನ್ನು ಮುಗಿಸಿ ಭೂಮಿಯನ್ನು ಸ್ಪರ್ಶಿಸುವ ಕ್ಷಣ ಸಮೀಪಿಸಿದಾಗ ಕೆನಡಿ ಬಾಹ್ಯಾಕಾಶ ಕೇಂದ್ರ ಝಘಮಗಿಸಲು ಶುರುವಾಗಿತ್ತು. ಕ್ಸೆನಾನ್ ದೀಪಗಳ
ಮಿಂಚು ಮೇಳೈಸಿತ್ತು. ಮತ್ತೊಂದು ಮಹತ್ಕಾರ್ಯಕ್ಕೆ ಅಣಿಯಾಗುತ್ತಿರುವ ಅಟ್ಲಾಂಟಿಸ್ ಗಗನನೌಕೆ ಕೂಡಾ ಅಲ್ಲಿ ಹಣಕಿನೋಡುತ್ತಿತ್ತು. 'ಎಂಡೆವರ್ ನ ಹೋರಾಟದ ಅಂತ್ಯವನ್ನು ನೋಡುವುದಕ್ಕೆ ಬೇಸರವಾಗುತ್ತಿದೆ.
ಆದರೆ ಎಂಡೆವರ್ ಒಂದು ಅಪ್ರತಿಮ ಆಸ್ತಿ' ಎಂಬ ಉದ್ಘಾರ 'ಎಂಡೆವರ್ ಕೊನೆಯ ಬಾರಿಗೆ ಭೂಮಿಗೆ ವಾಪಸಾಗುತ್ತಿರುವುದನ್ನು' ನೋಡಲು ನಿಂತಿದ್ದ ಜನರ ಬಾಯಿಯಿಂದ ಹೊರಬಿತ್ತು. ಎಂಡೆವರ್ ನ ಸಾಧನೆ
ಎಂತಹುದ್ದೆಂದು ನಿರೂಪಿಸಲು ಇದೊಂದೇ ಉದ್ಘಾರ ಸಾಕು.
*****
ಬಾಹ್ಯಾಕಾಶ ಕ್ಷೇತ್ರದಲ್ಲಿ ಅತ್ಯಧಿಕ ಪೈಪೋಟಿ ಇರುವುದು ಅಮೆರಿಕ ಮತ್ತು ರಷ್ಯಾದ ನಡುವೆ. ಇವುಗಳಿಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮುವ, ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ವಿತೀಯವಾಗಿ ಮೆರೆಯುವ ಎಲ್ಲ
ಅವಕಾಶಗಳು ಮತ್ತು ಸಾಮರ್ಥ್ಯ ಭಾರತಕ್ಕಿದೆ. ಇಂಥದ್ದೊಂದು ಸಾಧನೆ ಮಾಡಲು 'ಚಂದ್ರಯಾನ-1'ರ ಯಶಸ್ಸಿನ ಸ್ಫೂರ್ತಿಯಿದೆ. ಅದುವೇ ಮಾದರಿಯೂ ಆಗಬೇಕಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ
ಮಿಂಚಬೇಕೆಂಬ ಹೆಬ್ಬಯಕೆ ಕಂಡಂತಹ ಹಲವಾರು ವಿಜ್ಞಾನಿಗಳು, ಗಗನಯಾನಿಗಳ ಮಾರ್ಗದರ್ಶನವೂ ಇದೆ. ಆದರೆ ಸಾಧನೆಗೆ ಮೊದಲ ಹೆಜ್ಜೆ ಇಡುವುದಕ್ಕೇ ನಾವು ಹೆದರುತ್ತಿದ್ದೇವೆ. ಕಾರಣ?
ಭ್ರಷ್ಟಾಚಾರ! ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ತುಂಬಿ ಹೋಗಿರುವ ಭ್ರಷ್ಟಾಚಾರ. ಭಾರತೀಯ ಬಾಹ್ಯಾಕಾಶ ಯೋಜನೆಗಳನ್ನು ರೂಪಿಸಬೇಕಾದ, ಅದನ್ನು ಸಾಧಿಸಬೇಕಾದ ಜವಾಬ್ದಾರಿ ಹೊತ್ತಂತಹ
ಭಾರತೀಯ ಬಾಹ್ಯಾಕಾಶ ಸಂಸ್ಥೆಯೇ (ಇಸ್ರೋ) ಹಗರಣಗಳ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವುದು! ಬಾಹ್ಯಾಕಾಶ ಯೋಜನೆಗಳ ಬಗ್ಗೆ ಅರಿವು ಹೊಂದಿರದ ನಾಯಕರು, ಬಜೆಟ್ ನಲ್ಲಿ ಸಾಕಷ್ಟು ಅನುದಾನವನ್ನು
ಇಸ್ರೋಗೆ ನೀಡದೇ ಇರುವುದು, ಇಸ್ರೋ ರೂಪಿಸುವಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೆ ತಕ್ಷಣವೇ ಪ್ರೋತ್ಸಾಹ ಸಿಗದಿರುವುದು.
ನಾಸಾದ 'ಎಂಡೆವರ್'ನ ಹೋರಾಟ 18 ವರ್ಷಗಳ ಕಾಲ ನಿರಂತರವಾಗಿ ಮತ್ತು ಯಶಸ್ವಿಯಾಗಿ ನಡೆದಿದೆ ಎಂದಾದರೆ ಅದಕ್ಕೆ ಅಮೆರಿಕ ಸರ್ಕಾರ ಅಷ್ಟೇ ಪ್ರೋತ್ಸಾಹ ನೀಡಿದೆ. 'ಎಂಡೆವರ್'ನ ಪ್ರತಿಯೊಂದು
ಹೋರಾಟದ ಯಾನಕ್ಕೂ ಹಲವು ಬಿಲಿಯನ್ ಡಾಲರ್ ಗಳು ಖರ್ಚಾಗಿವೆ. ಆದರೂ ಅದರ ಸಾಧನೆಯ ಮುಂದೆ ಖರ್ಚು ನಗಣ್ಯವಾಗುತ್ತದೆ. 'ಅಷ್ಟೊಂದು ಖರ್ಚು ಮಾಡುವ ತಾಕತ್ತು ನಮಗಿಲ್ಲ' ಎಂದು ನಮ್ಮ
ನಾಯಕರು ಹೇಳಿಕೆಗಳನ್ನು ನೀಡಬಹುದು. ಅಕ್ರಮವಾಗಿ ರಾಜಕಾರಣಿಗಳು ಮತ್ತು ಅವರ ಕುಟುಂಬದ ಪಾಲಾಗುವ ಹಣವನ್ನೇ ಇಂತಹ ಯೋಜನೆಗಳಿಗೆ ಬಳಸಿಕೊಂಡರೆ 'ಎಂಡೆವರ್'ನಷ್ಟು ಅಲ್ಲವಾದರೂ ಅದರ
ಅರ್ಧದಷ್ಟು ಸಾಧನೆಯನ್ನಾದರೂ ಮಾಡಲು ಸಾಧ್ಯವಾದೀತು!
'ಚಂದ್ರಯಾನ-1' ಯೋಜನೆ ಅರ್ಧದಲ್ಲೇ ವಿಫಲವಾಗಿದೆ. ಚಂದ್ರಯಾನ-1ರ ಉಪಕರಣಗಳು ನಿರೀಕ್ಷಿತ ಕಾರ್ಯವನ್ನು ಮಾಡುವ ಮುನ್ನವೇ ಸ್ಥಗಿತಗೊಂಡಿವೆ ಎಂಬೆಲ್ಲ ಸುದ್ದಿಗಳು ಹಬ್ಬಿದಾಗ ದಿಕ್ಕು ತೋಚದಂತೆ
ಕುಳಿತಿದ್ದರು ನಮ್ಮ ನಾಯಕರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮಗಾದ ಮುಖಭಂಗದಿಂದ ಪಾರಾಗಲು 'ಚಂದ್ರಯಾನ-1'ರ ಜೊತೆಗೆ ಕಳುಹಿಸಿದ್ದ ನಾಸಾದ ಉಪಕರಣ ಚಂದ್ರನಲ್ಲಿ ನೀರಿದೆ ಎಂಬ ಸತ್ಯವನ್ನು
ಅನಾವರಣಗೊಳಿಸಬೇಕಾಯಿತು. ಯಾಕೆ ನಮ್ಮಲ್ಲಿ ಆ ಸಾಮರ್ಥ್ಯ ಇರಲಿಲ್ಲವೇ? ಅಥವಾ ಅಮೆರಿಕದ 'ಕೈಗೊಂಬೆಗಳಂತೆ' ವರ್ತಿಸುವ ನಮ್ಮ ನಾಯಕರಲ್ಲಿ ಸ್ವಾಭಿಮಾನದ ಕಿಚ್ಚಿಲ್ಲವೇ? ಬಾಹ್ಯಾಕಾಶ ಕ್ಷೇತ್ರದಲ್ಲಿ
ಅಮೆರಿಕ, ರಷ್ಯಾಕ್ಕೆ ಸೆಡ್ಡು ಹೊಡೆಯುವಂತೆ ನಮ್ಮ ನೆರೆಯ ರಾಷ್ಟ್ರ, ಬದ್ಧ ವೈರಿ ಚೀನಾ ಬೆಳೆಯುತ್ತಿದೆ. ಅಭಿವೃದ್ಧಿಯ ಪುಟಿತ ಆ ದೇಶಕ್ಕಿದೆಯಂತೆ, ನಮಗಿಲ್ಲವೇ? ಸಣ್ಣ ಪುಟ್ಟದ್ದನ್ನೇ ದೊಡ್ಡ ಸಾಧನೆಯೆಂದು
ಬಿಂಬಿಸಿಕೊಳ್ಳುತ್ತೇವೆ ನಾವು. ಒಂದೇ ಒಂದು ಬಾರಿ 'ಎಂಡೆವರ್'ನ ಹೋರಾಟದ ಹಾದಿಯ ಚಿತ್ರಣವನ್ನು ಜೊತೆಗಿಟ್ಟುಕೊಂಡು ನೋಡಿ, ನಮ್ಮ ಸಾಧನೆ ಶೂನ್ಯದ ಹತ್ತಿರವಿರುತ್ತದೆ. ಈ ಅಂತರವನ್ನು ಬದಲಿಸಿ,
ನಾವು ಕೂಡಾ ಸಾಧನೆ ಮಾಡಬಲ್ಲೆವೆಂದು ನಿರೂಪಿಸಬೇಕಾದರೆ ಮಹತ್ ಸಾಹಸವೊಂದಕ್ಕೆ ಕೈ ಹಚ್ಚಲೇಬೇಕು. ಅದಕ್ಕಾಗಿ ನಮ್ಮ ಮನಸ್ಸುಗಳು ಮಿಡಿಯಲೇಬೇಕು. ಆ ಮಹಾನ್ ಸಾಧನೆಯನ್ನು ಸಿದ್ಧಿಸಿಕೊಳ್ಳುವ
ದಿನವನ್ನು ಪ್ರತಿಯೊಬ್ಬ ಭಾರತೀಯನೂ ಎದುರು ನೋಡುತ್ತಿದ್ದಾನೆ ಎಂಬುದನ್ನು ನಮ್ಮನ್ನಾಳುವ ನಾಯಕರು ಅರ್ಥೈಸಿಕೊಂಡಾರೇ? ಇಂತಹುದೊಂದು ದಿಟ್ಟ ಸವಾಲನ್ನು ನಮ್ಮ ನಾಯಕರು ಎದುರಿಸಿಯಾರು
ಎಂಬುದು ಕನಸಿನ ಮಾತಾದೀತೇನೋ?
Comments
Post a Comment