ಪರಿವರ್ತನೆಯ ಹಾದಿಯಲ್ಲಿ ಮುಸ್ಲಿಮ್ ಮಹಿಳೆ
ಒಬ್ಬ ಮಹಿಳೆಗೆ ಶಿಕ್ಷಣ ನೀಡಿದರೆ ಒಂದು ಕುಟುಂಬವೇ ಸುಶಿಕ್ಷಿತವಾದಂತೆ. ಒಬ್ಬ ಮಹಿಳೆಗೆ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದರೆ ಒಂದು ಕುಟುಂಬವೇ ಹಕ್ಕುಗಳ ಬಗ್ಗೆ ಜಾಗೃತಗೊಂಡಂತೆ!
ಈ ಮಾತು ಹೇಳಬೇಕೆನ್ನಿಸಿದ್ದು ಭಾರತೀಯ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ಜಾಗೃತರಾಗುತ್ತಿರುವ ಮಹತ್ವದ ಬೆಳವಣಿಗೆಯನ್ನು ಗಮನಿಸಿದಾಗ.
ಆಕೆ ನಾಝಿಯಾ ನಿಜಾಮಿ. ಗಂಡನೊಂದಿಗೆ ಸಂಸಾರ ಸರಿಹೋಗಲಿಲ್ಲ. ಪ್ರತಿದಿನ ಕಿರುಕುಳ ಕೊಡುತ್ತಿದ್ದ ಗಂಡನೊಂದಿಗೆ ಬದುಕು ಹಂಚಿಕೊಳ್ಳುವುದು, ತನಗಾಗುತ್ತಿರುವ ನೋವನ್ನು ಸಹಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸಾಧ್ಯ? ತಾಳ್ಮೆ, ಸಹನೆಯ ಕಟ್ಟೆಯೊಡೆದಾಗ ಒಳಗಿನ ನೋವು, ದುಃಖ, ಹತಾಶೆ ಹೊರಗೆ ಧುಮ್ಮಿಕ್ಕಲೇಬೇಕು, ಸಿಡಿವ ಅಗ್ನಿಪರ್ವತದಂತೆ. ನಿಜಾಮಿಯ 'ಸಹನಾಕಟ್ಟೆ'ಯೂ ಸಿಡಿಯಿತು. ಸಂಸಾರದ ಕೊಂಡಿ ತಪ್ಪಿತು. ಗಂಡ ಎನ್ನಿಸಿಕೊಂಡ ಸಯ್ಯದ್ ನದೀಮ್ 'ತಲಾಖ್' ಎಂದ. ನಿಜಾಮಿ ಬಿಡಲಿಲ್ಲ, ಜೀವನಾಂಶ ಕೇಳಿದಳು. 'ಕೊಡಕ್ಕಾಗಲ್ಲ' ಎಂದ ಸಯ್ಯದ್ ನನ್ನು ಸುಮ್ಮನೇ ಬಿಟ್ಟರೆ ತನ್ನ ಹಕ್ಕು ಕಳಕೊಂಡಂತೆ ಎಂಬ ಸತ್ಯವನ್ನು ಅರಿತುಕೊಂಡಿರುವ ನಿಜಾಮಿ ನ್ಯಾಯಾಲಯದ ಕಟಕಟೆ ಏರಿದಳು. ಕೆಳಹಂತದ ನ್ಯಾಯಾಲಯ ಆಕೆಯ ಪರವಾಗಿಯೇ ತೀರ್ಪು ನೀಡಿ, ಮಾಸಿಕ 8,000 ರು. ಜೀವನಾಂಶ ನೀಡುವಂತೆ ಸಯ್ಯದ್ ನದೀಮ್ ಗೆ ಆದೇಶ ನೀಡಿತು.
ಇದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಯ್ಯದ್. 'ಆಕೆಗೆ ಜೀವನಾಂಶ ಕೊಡುವುದು ಹೇಗೆ ಸಾಧ್ಯ? ನಾನು ಆಕೆಯನ್ನು ಮದುವೆಯಾದದ್ದು, ಆಕೆಗೆ ತಲಾಖ್ ಹೇಳಿದ್ದು ಶರಿಯಾ ಕಾನೂನಿನ ಪ್ರಕಾರ. ಈ ಕಾನೂನಿನ ಪ್ರಕಾರ ವಿಚ್ಛೇದಿತ (ಮುಸ್ಲಿಮ್) ಮಹಿಳೆಗೆ ಜೀವನಾಂಶ ಕೊಡಬೇಕಿಲ್ಲ. ನಮ್ಮಲ್ಲಿ ಮಹಿಳೆಯರ ರಕ್ಷಣೆಗಾಗಿಯೇ ಶರಿಯಾ ಕಾನೂನು ಮತ್ತು ಕೇಂದ್ರ ಸರ್ಕಾರವೇ ರೂಪಿಸಿದ 'ವಿಚ್ಛೇದನದ ವೇಳೆ ಮುಸ್ಲಿಮ್ ಮಹಿಳೆಯ ಹಕ್ಕುಗಳ ರಕ್ಷಣಾ ಕಾಯ್ದೆ' ಇದೆ. ನಮ್ಮ ಸಮುದಾಯಕ್ಕೆ ಕೌಟುಂಬಿಕ ಕಿರುಕುಳ ಕಾಯ್ದೆ (ಡೊಮೆಸ್ಟಿಕ್ ವಯಲೆನ್ಸ್ ಆಕ್ಟ್)- 2005 ಅನ್ವಯವಾಗುವುದಿಲ್ಲ. ಅಲ್ಲದೆ ನಿಜಾಮಿ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಮುಂಚೆ ನಮ್ಮ ವಿಚ್ಛೇದನವಾಗಿತ್ತು' ಎಂಬುದು ಸಯ್ಯದ್ ವಾದ.
'ಅಲ್ಲಾ ಸ್ವಾಮೀ, ನಾವೆಲ್ಲ ಭಾರತ ದೇಶದ ಪ್ರಜೆಗಳು. ಇದೇ ನೆಲದ ಆಹಾರ, ನೀರು, ಗಾಳಿ ಸೇವಿಸಿ ಬದುಕುತ್ತಿದ್ದೇವೆ. ನಮಗೆ ಕಿರುಕುಳ ಆದರೆ ನಮ್ಮ ರಕ್ಷಣೆಗೆ ಮಾತ್ರ ಈ ಕಾಯ್ದೆಗಳು ಅನ್ವಯವಾಗುವುದಿಲ್ಲವೇ? ಒಂದೇ ದೇಶದ ವಿಭಿನ್ನ ಪ್ರಜೆಗಳಿಗೆ ವಿಭಿನ್ನ ನ್ಯಾಯ ಎಂದರೆ ಹೇಗಾಗುತ್ತದೆ? ಹಾಗಿದ್ದರೆ ಎಂಥದ್ದೇ ಕಿರುಕುಳ ಕೊಟ್ಟರೂ ನಾವದನ್ನು ಪ್ರಶ್ನಿಸಬಾರದೇ? ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಕ್ಕೂ ನಮಗೆ ಅವಕಾಶ ಇಲ್ಲ ಅಂದರೆ ಹೇಗಾದೀತು?' ಎಂದು ದೆಹಲಿ ಹೈಕೋರ್ಟ್ ನ ಮುಂದೆ ತನ್ನ ವಾದ ಮಂಡಿಸಿದ್ದಾಳೆ ನಿಜಾಮಿ.
'ನಮ್ಮಲ್ಲಿ ಶರಿಯಾ ಕಾನೂನಿದೆ. ಇದರ ಪ್ರಕಾರ ವಿಚ್ಛೇದಿತೆಗೆ ಜೀವನಾಂಶ ಕೊಡಬೇಕಿಲ್ಲ' ಎನ್ನುತ್ತಾನೆ ಸಯ್ಯದ್.
ದೇಶದೆಲ್ಲೆಡೆ ಬಹುಚರ್ಚಿತವಾದ ಮಧ್ಯಪ್ರದೇಶದ ಶಾಹಬಾನೋ ಪ್ರಕರಣವೂ ಇಂಥದ್ದೇ ಒಂದು ವಿಚ್ಛೇದನಕ್ಕೆ ಸಂಬಂಧಿಸಿದ್ದು. ತನ್ನ ಹಕ್ಕಿಗಾಗಿ ಕಾನೂನು ಹೋರಾಟದ ಮೊರೆ ಹೋದ ಶಾಹಬಾನೋ ಸುಪ್ರೀಂ ಕೋರ್ಟ್ ವರೆಗೆ ಹೋದಳು. ಸುಪ್ರೀಂ ಕೋರ್ಟ್ ಆಕೆಗೆ ಮಾಸಿಕ 500 ರು. ಜೀವನಾಂಶ ಕೋಡುವಂತೆ ಆಕೆಯ ವಿಚ್ಛೇದಿತ ಪತಿಗೆ ಆದೇಶ ನೀಡಿತು. ಆಗ ಕೇಂದ್ರದಲ್ಲಿದ್ದದ್ದು ರಾಜೀವ್ ಗಾಂಧಿ ಸರ್ಕಾರ. ಎಲ್ಲಿ ತನಗೆ ಬರುವ ಅಲ್ಪಸಂಖ್ಯಾತರ ಮತಗಳು ನಷ್ಟವಾಗುತ್ತವೋ ಎಂದು ಹೆದರಿದ ರಾಜೀವ್ ಸರ್ಕಾರ 'ವಿಚ್ಛೇದನದ ಸಮಯದಲ್ಲಿ ಮುಸ್ಲಿಮ್ ಮಹಿಳೆಯ ರಕ್ಷಣಾ ಕಾಯ್ದೆ- 1986' ರಚಿಸಿತು. ಮೂರನೇ ಎರಡು ಬಹುಮತದೊಂದಿಗೆ ಅದನ್ನು ಅಂಗೀಕರಿಸಿತು. ಇದರಿಂದಾಗಿ ಶಾಹಬಾನೋಗೆ ಜೀವನಾಂಶ ಸಿಗದಂತಾಯಿತು. ಈ ಕಾಯ್ದೆಯ ಪ್ರಕಾರ ತಲಾಖ್ ಆದ 90 ದಿನಗಳವರೆಗೆ ಅಂದರೆ 'ಇದ್ದತ್' ಅವಧಿಯಲ್ಲಿ ಮಾತ್ರ ವಿಚ್ಛೇದಿತ ಮುಸ್ಲಿಮ್ ಮಹಿಳೆ ತನ್ನ ವಿಚ್ಛೇದಿತ ಗಂಡನಿಂದ ಜೀವನಾಂಶ ಪಡೆಯಲು ಅರ್ಹಳಾಗಿರುತ್ತಾಳೆ. (ಇದ್ದತ್ ಅವಧಿಯಲ್ಲಿ ಮುಸ್ಲಿಮ್ ಮಹಿಳೆಯು ಬೇರೊಬ್ಬನನ್ನು ಮದುವೆಯಾಗುವಂತಿಲ್ಲ.) ಅದರ ನಂತರವೂ ಆಕೆಯನ್ನು, ಆಕೆಯ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಾದ ಪಕ್ಷದಲ್ಲಿ ಅವರ ಜೀವನ ನಿರ್ವಹಣೆಯನ್ನು ನೋಡಿಕೊಳ್ಳುವಂತೆ ಮ್ಯಾಜಿಸ್ಟ್ರೇಟರು ವಕ್ಫ್ ಮಂಡಳಿಗೆ ಆದೇಶಿಸಬಹುದು.
ತನ್ನ ವಾದವನ್ನು ಮುಂದುವರಿಸಿದ ನಿಜಾಮಿ 'ವಿಚ್ಛೇದನ ಪಡೆದ ನನಗೆ ಯಾರು ದಿಕ್ಕು? ನನ್ನ ಬದುಕು ಹೇಗೆ ಸಾಗಬೇಕು. ನಮಗೊಂದು ನ್ಯಾಯ, ಬೇರೆಯವರಿಗೊಂದು ನ್ಯಾಯ ಎಂದರೆ ಸರಿಯಾಗದು. ಜೀವನಪರ್ಯಂತ ಗಂಡನೊಂದಿಗೆ ಸುಖವಾಗಿ ಜೀವಿಸುವ ಕನಸು ಹೊತ್ತು ಬಂದಿರುತ್ತೇವೆ. ಗಂಡನೇ ಸರ್ವಸ್ವ ಎಂದು ಭಾವಿಸುತ್ತೇವೆ. ಅಂಥ ಗಂಡನೇ ಕಿರುಕುಳ ನೀಡಿದರೆ ಮತ್ತು ಆ ಕಿರುಕುಳವನ್ನು ಪ್ರಶ್ನಿಸಿದಾಗ ತಲಾಖ್ ಹೇಳಿ ಕೈತೊಳೆದುಕೊಂಡರೆ ನಮಗೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆಯೇ? ಅದನ್ನು ಪ್ರಶ್ನಿಸುವುದೂ ತಪ್ಪಾಗುತ್ತದೆಯೇ? ಕೈಹಿಡಿದು ನಡೆಸಬೇಕಾದ ಗಂಡ ಕಿರುಕುಳ ಕೊಟ್ಟರೆ ಆತನಿಗೆ ಶಿಕ್ಷೆಯೇ ಇಲ್ಲವೇ?' ಎಂದು ನ್ಯಾಯಾಲಯವನ್ನು ಪ್ರಶ್ನಿಸಿದ್ದಾಳೆ.
ಹೌದು, ನಿಜಾಮಿ ಹೇಳಿದ್ದು ನಿಜ. ಗಂಡ ಹಾಕಿದ ಪರಿಧಿಗೆ ಸೊಲ್ಲೆತ್ತದೆ ಕುಳಿತಿರಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದ ಆಕೆ ಈಗ ಬದಲಾಗಿದ್ದಾಳೆ. 'ಹಕ್ಕು' ಎಂದರೇನೆಂಬುದನ್ನು ಆಕೆ ಅರಿತುಕೊಂಡಿದ್ದಾಳೆ.
ಇದು ಒಬ್ಬ ನಿಜಾಮಿಯ ಕಥೆಯಲ್ಲ. ಇಂಥ ನಿಜಾಮಿಯರು ಭಾರತದಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗೆ ನೋಡಿದರೆ ಶಾಹಬಾನೋ ಗೆದ್ದು ಸೋತಿದ್ದಾಳೆ. ಸೋತು ಗೆದ್ದಿದ್ದಾಳೆ. ಆಕೆಗೆ ಸಿಗಬೇಕಿದ್ದ ಜೀವನಾಂಶಕ್ಕೆ ತಡೆ ಬಿದ್ದಿರಬಹುದು. ಆದರೆ ದೇಶಾದ್ಯಂತದ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಕಾನೂನು ಹೋರಾಟ ನಡೆಸುವುದಕ್ಕೆ ಪ್ರೇರಣೆಯಾಗಿದ್ದಾಳೆ. ಪ್ರಸ್ತುತ ದೇಶಾದ್ಯಂತ ವಿವಿಧ ಪ್ರದೇಶಗಳ ಮುಸ್ಲಿಮ್ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಕಾನೂನು ಹೋರಾಟ ಶುರು ಮಾಡಿದ್ದಾರೆ. ಯಾವೆಲ್ಲ ಹಕ್ಕುಗಳಿಂದ ತಮ್ಮನ್ನು ನಿರ್ಬಂಧಿಸಲಾಗಿತ್ತೋ ಅದನ್ನು ಪ್ರಶ್ನಿಸುತ್ತಿದ್ದಾರೆ. ದೆಹಲಿ ಹೈಕೋರ್ಟ್ ಸದ್ಯಕ್ಕಂತೂ ನಿಜಾಮಿ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ನೀಡಿದ್ದ ತೀರ್ಪಿಗೆ ತಡೆಯೊಡ್ಡಿದೆ. ಮುಂದೆ ಅದು ಏನು ತೀರ್ಪು ನೀಡುತ್ತಿದೆಯೋ ಅದು ಭವಿಷ್ಯದ ವಿಚಾರ. ಅದರ ಬಗ್ಗೆ ಚರ್ಚಿಸುವದಕ್ಕಿಂತ ಇಲ್ಲಿ ಆಕೆಗೆ ತನ್ನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿದೆ ಎಂಬುದು ಪ್ರಮುಖವಾದ ಅಂಶವಾಗುತ್ತದೆ.
ಇಷ್ಟೊಂದು ಜಾಗೃತಿ ಮೂಡುವುದಕ್ಕೆ ಕಾರಣವಾದರೂ ಏನು? ಖಂಡಿತವಾಗಿಯೂ ಇದರ ಶ್ರೇಯಸ್ಸಿನ ಒಂದು ಪಾಲು ಶಿಕ್ಷಣಕ್ಕೆ ಸಲ್ಲಬೇಕು. ಪ್ರಾಥಮಿಕ ಹಂತದ ಶಿಕ್ಷಣವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ಇಲ್ಲದಿದ್ದಂಥ ಸಂದರ್ಭದಲ್ಲಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಹೇಗೆ ಎಂಬುದರ ಅರಿವು ಇದ್ದಿಲ್ಲದೇ ಇರಬಹುದು ನಿಜ. ಆದರೆ ಕಾಲ ಬದಲಾಗಿದೆ. ಆ ಕಾಲಕ್ಕೆ ಮುಸ್ಲಿಮ್ ಮಹಿಳೆಯೂ ತನ್ನನ್ನು ತಾನು ಒಗ್ಗಿಸಿಕೊಂಡಿದ್ದಾಳೆ. ಶಿಕ್ಷಣದ ಮಹತ್ವ ಏನು ಎಂಬುದು ಹೆಣ್ಣು ಹೆತ್ತ ಮುಸ್ಲಿಮ್ ದಂಪತಿಗೆ ಗೊತ್ತಾಗಿದೆ. ತಮ್ಮ ಮಕ್ಕಳೂ ಸುಶಿಕ್ಷಿತರಾಗಬೇಕೆಂದು ಭಾರತದ ಹಳ್ಳಿ ಹಳ್ಳಿಯಲ್ಲಿ ವಾಸಿಸುತ್ತಿರುವ ಮುಸ್ಲಿಮರು ಬಯಸುತ್ತಿದ್ದಾರೆ ಎಂದರೆ ಖಂಡಿತಕ್ಕೂ ಇದು ಮಹಾನ್ ಪರಿವರ್ತನೆಯೆಂದೇ ಹೇಳಬೇಕು. ಹಳ್ಳಿಗಳನ್ನು ತಲುಪುತ್ತಿರುವ ಮಾಧ್ಯಮದ ಪಾತ್ರವೂ ಇದರಲ್ಲಿ ಕೆಲಸ ಮಾಡಿರಬಹುದು.
ಹಾಗಂತ ಮುಸ್ಲಿಮ್ ಮಹಿಳೆಯಲ್ಲಾದ ಪರಿವರ್ತನೆಗೆ, ತನ್ನ ಹಕ್ಕುಗಳ ಬಗ್ಗೆ ಮೂಡಿದಂಥ ಜಾಗೃತಿಗೆ ಇದುವೇ ಪ್ರಮುಖ ಕಾರಣ ಎಂದರೆ ತಪ್ಪಾಗುತ್ತದೆ. ಹಾಗಿದ್ದರೆ ಪ್ರಮುಖ ಕಾರಣವಾದರೂ ಯಾವುದಿರಬಹುದು?- ಆಗಲೇ ಹೇಳಿದಂತೆ ಸಹನೆಯ ಕಟ್ಟೆ ಒಡೆದು ಹೋಗಿರುವುದು! ಹಲವು ವರ್ಷಗಳಿಂದ ಕಟ್ಟಿಟ್ಟ ದುಃಖ, ನೋವುಗಳೆಲ್ಲವೂ ಒಟ್ಟಾಗಿ ಸ್ಫೋಟಿಸಿದವು ಎಂದರೆ ಅತಿಶಯೋಕ್ತಿಯಾಗಲಾರದು. ನಾಲ್ಕು ಗೋಡೆಯ ನಡುವೆ ತನ್ನ ದುಃಖವನ್ನು ಹುದುಗಿಸಿಡಬೇಕಾದ ಸ್ಥಿತಿಯಲ್ಲಿನರಳುತ್ತಿದ್ದ ಆಕೆಯ ಮನಸ್ಸಲ್ಲಿ ನೋವಿನ ಮೂಟೆಗಳು ಅದೆಷ್ಟಿದ್ದಿರಬಹುದು? ಅಷ್ಟು ಭಾರವನ್ನು ಹೊತ್ತಿದ್ದ ಆಕೆ ಒಂದು ಹಂತದಲ್ಲಿ ತನ್ನೆಲ್ಲಾ ನೋವುಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕಾದ ದೃಢ ನಿರ್ಧಾರಕ್ಕೆ ಬಂದಿರುವುದು ಖಂಡಿತಕ್ಕೂ ಮೆಚ್ಚಬೇಕಾದಂಥ ಸಂಗತಿ.
ನ್ಯಾಯಾಲಯ ಇಂಥ ಪ್ರಕರಣಗಳ ವಿಚಾರಗಳಲ್ಲಿ ಅದೇನು ತೀರ್ಪು ಕೊಡುತ್ತದೆಯೋ? ಅದು ಬೇರೆಯದೇ ವಿಚಾರ. ತೀರ್ಪಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಮುಸ್ಲಿಮ್ ಮಹಿಳೆ ಹೋರಾಟದ ಅಖಾಡಕ್ಕಿಳಿದಿದ್ದಾಳಲ್ಲಾ, ಅದಕ್ಕೆ ಖುಷಿಪಡಬೇಕು. ಹಕ್ಕುಗಳನ್ನು ಪಡೆದುಕೊಳ್ಳುವುದು ಒಂದೇ ದಿನಕ್ಕೆ ಸಾಧ್ಯವಿಲ್ಲ ಎಂಬುದೂ ವಾಸ್ತವವೇ! ಹಾಗಂತ ಅದರ ಬಗ್ಗೆ ಸೊಲ್ಲೆತ್ತದೇ ಇದ್ದರೆ ಯಾವುದೋ ಒಂದು ಕಾಲಘಟ್ಟದಲ್ಲಿಯಾದರೂ ಸಿಗುವುದಕ್ಕೆ ಸಾಧ್ಯವಿರುವುದೂ ಸಹ ಕೈತಪ್ಪಿ ಹೋದೀತು. ಇಂದು ಶಾಹಬಾನೋ, ನಾಝಿಯಾ ನಿಜಾಮಿ. ನಾಳೆ ಇನ್ನೊಬ್ಬಾಕೆ, ನಾಡಿದ್ದು ಮತ್ತೊಬ್ಬಾಕೆ. ಹೀಗೆ ಹಕ್ಕುಗಳಿಗಾಗಿ ಪ್ರತಿಯೊಬ್ಬ ಮಹಿಳೆಯೂ ಹೋರಾಡಿದರೆ ಒಂದು ಹಂತಕ್ಕೆ ಆಕೆಗೆ ನ್ಯಾಯ ಒದಗಿಸಲೇಬೇಕಾಗುತ್ತದೆ. ಆ ದೂರದೃಷ್ಟಿಯನ್ನಿಟ್ಟುಕೊಂಡಿದ್ದೇ ಆದಲ್ಲಿ ಮಹಿಳೆ ತನ್ನ ಮೇಲಾಗುತ್ತಿರುವ ಕೌಟುಂಬಿಕ ಕಿರುಕುಳದಿಂದ ಮುಕ್ತಿ ಪಡೆಯಬಹುದು.
ನ್ಯಾಯಾಲಯದ ಹೋರಾಟ ಎಂದರೆ ಅದು ದೀರ್ಘಕಾಲ ತೆಗೆದುಕೊಳ್ಳುವುದು ಸಹಜ. ಕೆಳಹಂತದ ನ್ಯಾಯಾಲಯದಲ್ಲಿ ಸಿಕ್ಕ ಜಯ ಮೇಲಿನ ಹಂತದ ನ್ಯಾಯಾಲಯದಲ್ಲಿ ಸೋಲಾಗಿ ಪರಿವರ್ತನೆಗೊಳ್ಳಬಹುದು. ಮತ್ತೆ ಅದನ್ನು ಅದಕ್ಕೂ ಮೇಲಿನ ಹಂತದಲ್ಲಿ ಪ್ರಶ್ನಿಸಿದಾಗ ಜಯ ಸಿಕ್ಕಲೂಬಹುದು. ಭರವಸೆಗಳು ಬದುಕಿನ ದಿಕ್ಕನ್ನು ಬದಲಿಸುತ್ತವೆ. ಅದಕ್ಕೆ ಶಿಕ್ಷಣದ ಬಲ ಸೇರಿದರೆ ಬದುಕು ನಿಖರವಾದ ಗುರಿಯೆಡೆಗೆ ಚಲಿಸುತ್ತದೆ. ಪ್ರಸ್ತುತ ಮುಸ್ಲಿಮ್ ಮಹಿಳೆ ಶಿಕ್ಷಣವನ್ನೂ ಪಡೆಯುತ್ತಿದ್ದಾಳೆ. ತನ್ನ ಹಕ್ಕುಗಳ ಬಗ್ಗೆಯೂ ಜಾಗೃತಳಾಗುತ್ತಿದ್ದಾಳೆ. ಅರ್ಥಾತ್ ತಾನು ಹಲವು ವರ್ಷಗಳಿಂದ ಅನುಭವಿಸುತ್ತಿದ್ದ, ಹೇಳಲಾಗದೇ ಮೌನವಾಗಿ ದುಃಖಿಸುತ್ತಿದ್ದ ಕಿರುಕುಳಗಳನ್ನು ಪ್ರಶ್ನಿಸುವ ಪ್ರೌಢಿಮೆಯನ್ನು ಪಡೆದಿದ್ದಾಳೆ. ಜ್ಞಾನ ವೃದ್ಧಿಯಾದಾಗ ಬುದ್ಧಿ ಜಾಗೃತವಾಗುತ್ತದೆ. ಹಾಗಾಗಿಯೇ ಆಕೆ ತನ್ನ ಹಕ್ಕುಗಳಿಗಾಗಿ ಹೋರಾಡುವಂಥ ಮಹತ್ಕಾರ್ಯಕ್ಕೆ ಸಜ್ಜಾಗಿದ್ದಾಳೆ, ಅಖಾಡಕ್ಕೆ ಧುಮುಕಿದ್ದಾಳೆ. ಭಾರತದಂಥ ದೇಶದಲ್ಲಿ ಇದೊಂದು ಮಹತ್ತರವಾದಂಥ ಕ್ರಾಂತಿ ಎನ್ನಿಸುತ್ತದೆ!
Comments
Post a Comment